ಮನೆ ಪ್ರಕೃತಿ ರಕ್ತಚಂದ್ರಗ್ರಹಣ ದಿನದಂದ ಹಲವು ದೇವಸ್ಥಾನಗಳು ಬಂದ್‌..!

ರಕ್ತಚಂದ್ರಗ್ರಹಣ ದಿನದಂದ ಹಲವು ದೇವಸ್ಥಾನಗಳು ಬಂದ್‌..!

0

ಬೆಂಗಳೂರು : ಇದೇ ಭಾನುವಾರ (ಸೆ.7) ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ನಗರದ ಗವಿಗಂಗಾಧರ ದೇವಾಲಯ ಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ. ಸೂರ್ಯಗ್ರಹಣವಾದರೆ ಗ್ರಹಣಕ್ಕೂ ಸ್ವಲ್ಪ ಹೊತ್ತಿನ ಮೊದಲು ದೇವಸ್ಥಾನ ಬಂದ್ ಮಾಡುತ್ತಿದ್ದೆವು. ಆದರೆ ಚಂದ್ರಗ್ರಹಣದಲ್ಲಿ ಹಾಗೇ ಮಾಡಲು ಬರುವುದಿಲ್ಲ. ಗ್ರಹಣಕ್ಕೂ ಮೊದಲು ಸುಮಾರು 6 ಗಂಟೆ ದೇವಾಲಯ ಬಂದ್ ಮಾಡಬೇಕಾಗುತ್ತದೆ.

ಹೀಗಾಗಿ ಬೆಳಗ್ಗೆ ಗಂಗಾಧರನಿಗೆ ಕ್ಷೀರ ನೈವೇದ್ಯ ನೀಡುತ್ತೇವೆ. ಕ್ಷೀರ ಬಿಟ್ಟು ಬೇರೆ ಪ್ರಸಾದ ನೀಡಲ್ಲ. ಬೆಳಗ್ಗೆ 11 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಬಾಗಿಲು ಬಂದ್ ಮಾಡಲಾಗುತ್ತದೆ. ಗ್ರಹಣ ಮೋಕ್ಷಗೊಂಡ ಕೂಡಲೇ ಶುದ್ಧೀಕರಣ ಮಾಡಲು ಆಗಲ್ಲ, ಮರುದಿನ ಬೆಳಗ್ಗೆ ಶುದ್ಧೀಕರಣ ಮಾಡಿದ ಬಳಿಕ ದರ್ಶನಕ್ಕೆ ಅವಕಾಶವಿರುತ್ತದೆ.

ರಕ್ತಚಂದ್ರಗ್ರಹಣ ಹಿನ್ನೆಲೆ ನಗರದ ಬಹುತೇಕ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆಯಾಗಲಿದೆ. ಯಾವ ದೇವಸ್ಥಾನ, ದರ್ಶನ ಸಮಯ ಯಾವಾಗ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಬನಶಂಕರಿ ದೇವಾಲಯ – ಬನಶಂಕರಿ ದೇವಿ ಜನ್ಮೋತ್ಸವದ ದಿನವೇ ರಕ್ತಚಂದ್ರಗ್ರಹಣ ಸಂಭವಿಸುತ್ತಿದೆ. ಗ್ರಹಣದ ದಿನ ಬೆಳಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ ನಡೆಯುತ್ತದೆ. ಜೊತೆಗೆ ದೇವಿಯ ಜನ್ಮೋತ್ಸವವಿರುವುದರಿಂದ ಚಂಡಿಕಾ ಹೋಮ ನಡೆಸಲಾಗುತ್ತದೆ. ಸಂಜೆ 4 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದ್ದು, ಬಳಿಕ 4:30ಕ್ಕೆ ದೇವಾಲಯ ಬಂದ್ ಮಾಡಲಾಗುತ್ತದೆ. ಮರುದಿನ ಬೆಳಗ್ಗೆ 6 ಗಂಟೆಗೆ ದೇವಾಲಯ ಹಾಗೂ ಆವರಣ ಶುದ್ಧೀಕರಣ ಮಾಡಲಾಗುತ್ತದೆ. ನಂತರ ಪೂಜೆ ಮಾಡಿ, ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ.

ಗಾಳಿ ಆಂಜನೇಯ ದೇವಸ್ಥಾನ – ಗ್ರಹಣದ ದಿನ ಮಧ್ಯಾಹ್ನ 3 ಗಂಟೆಗೆ ದೇವಾಲಯವನ್ನು ಬಂದ್ ಮಾಡಲಾಗುತ್ತದೆ. ಹೀಗಾಗಿ 2:30ರ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. 2:30ರಿಂದ 3ಗಂಟೆವರೆಗೆ ದೇವಾಲಯದ ಒಳಗೆ ದರ್ಬೆ ಇಡಲಾಗುತ್ತದೆ. ಗ್ರಹಣ ಮುಗಿದ ಬಳಿಕ ಬೆಳಗ್ಗೆ ಶಾಂತಿ ಪೂಜೆ ಮಾಡಿ, ಎಂದಿನಂತೆ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ.

ಕಾಡು ಮಲ್ಲೇಶ್ವರ ದೇವಾಲಯ – ಗ್ರಹಣದ ದಿನ ಬೆಳಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಮಧ್ಯಾಹ್ನ 2:30ವರೆಗೆ ಮಾತ್ರ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ. ಗ್ರಹಣದ ಸಮಯದಲ್ಲಿ ಎಲ್ಲಾ ದೇವರುಗಳ ಮೇಲೆ ದರ್ಬೆ ಇಡಲಾಗುತ್ತದೆ. ಗ್ರಹಣ ಮುಗಿದ ಮರುದಿನ ಬೆಳಿಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಶುದ್ಧೀಕರಣ ಮಾಡಿ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆ ಇರಲಿದೆ. ನಂತರ ದರ್ಶನಕ್ಕೆ ಅವಕಾಶವಿರುತ್ತದೆ.

ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ – ಸೆಪ್ಟಂಬರ್ 7 ರಂದು ಭಾನುವಾರ ಮಧ್ಯರಾತ್ರಿ ಚಂದ್ರಗ್ರಹಣ ಗೋಚರಿಸಲಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನ ಸಂಜೆ 4:30 ಗಂಟೆಗೆ ಬಂದ್‌ ಮಾಡಲಾಗುತ್ತಿದೆ. ಗ್ರಹಣದ ಅಂಗವಾಗಿ ಪ್ರತಿ ದಿನವೂ 8:30ಕ್ಕೆ ಕ್ಲೋಸ್ ಮಾಡಲಾಗುತ್ತಿದ್ದ ದೇವಾಲಯದ ಬಾಗಿಲನ್ನ ಈ ವರ್ಷ ಸಂಜೆ 4:30ಕ್ಕೆ ಮುಚ್ಚಲಾಗುತ್ತದೆ. ಗ್ರಹಣದ ನಂತರ ಎಂದಿನಂತೆ ಮರುದಿನ ಬೆಳಿಗ್ಗೆ ಶುದ್ದೀಕರಣ ಮಾಡಿ ಬಳಿಕ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹೀಗಾಗಿ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.