ಮಹಾರಾಷ್ಟ್ರ: ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಹಿಂಸಾಚಾರ ಭುಗಿಲೆದ್ದಿದ್ದು, ಬೀಡ್ ಜಿಲ್ಲೆಯ ಮಹಾರಾಷ್ಟ್ರ ಶಾಸಕ ಪ್ರಕಾಶ್ ಸೋಲಂಕಿ ಅವರ ಮನೆಗೆ ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆದು ಬೆಂಕಿ ಹಚ್ಚಿದ್ದಾರೆ.
ಮರಾಠ ಕೋಟಾ ಪರ ಹೋರಾಟಗಾರ ಮನೋಜ್ ಪಾಟೀಲ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಯಿಂದ ಪ್ರತಿಭಟನಾಕಾರರು ಕೋಪಗೊಂಡರು.
ಶಾಸಕ ಪ್ರಕಾಶ್ ಸೋಲಂಕಿ ಅವರ ನಿವಾಸವನ್ನು ಮರಾಠಾ ಮೀಸಲಾತಿ ಚಳವಳಿಗಾರರು ಸುತ್ತುವರೆದು ಮನೆಗೆ ಕಲ್ಲುಗಳನ್ನು ಎಸೆದು, ಮನೆಯ ಕೆಳಗೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಇದರ ಪರಿಣಾಮ ವಾಹನಗಳಿಗೆ ಹಚ್ಚಿದ ಬೆಂಕಿ ಮನೆಗೆ ವ್ಯಾಪಿಸಿದೆ ಎನ್ನಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸೋಲಂಕಿ, “ಘಟನೆ ನಡೆದಾಗ ನಾವೆಲ್ಲರೂ ಮನೆಯೊಳಗೇ ಇದ್ದೆವು. ಅದೃಷ್ಟವಶಾತ್, ನನ್ನ ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ, ಆದರೆ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ” ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ”ಈ ಪ್ರತಿಭಟನೆ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ, ಇದು ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಮನೋಜ್ ಜೈರಂಗೇ ಪಾಟೀಲ್ (ಮರಾಠ ಕೋಟಾ ಕಾರ್ಯಕರ್ತ) ಗಮನಿಸಬೇಕು ಎಂದು ಹೇಳಿದರು.