ಮನೆ ರಾಜ್ಯ ವಿಧಾನ ಪರಿಷತ್ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ

ವಿಧಾನ ಪರಿಷತ್ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ

0

ಹುಬ್ಬಳ್ಳಿ: ವಿಧಾನ ಪರಿಷತ್ತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ನಾನು ಸ್ವಇಚ್ಛೆಯಿಂದ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ನಲ್ಲಿ ಜಾತ್ಯತೀತ ತತ್ವಗಳು ಉಳಿದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದರು.

ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ.  ಅಧಿವೇಶನದಲ್ಲಿ ವಿಷಯಾಧಾರಿತವಾಗಿ ಬೆಂಬಲ ನೀಡಿದ್ದೇನೆ. ಕೃಷಿ, ಎಪಿಎಂಸಿ ಕಾಯ್ದೆಗಳ ವಿಚಾರದಲ್ಲಿ ಜೆಡಿಎಸ್ ಅಂದಿನ ಆಡಳಿತ ಪಕ್ಷದ ಪರ ನಿಂತಿತು. ಆದರೆ ನಾನು ಆತ್ಮಸಾಕ್ಷಿ ಅನುಗುಣವಾಗಿ ರೈತರ ಪರ ನಿಲುವು ತಳೆದಿದ್ದೆ. ಜೆಡಿಎಸ್ ನಲ್ಲಿ ಯಾವುದೇ ಪ್ರಮುಖ ತೀರ್ಮಾನಗಳಲ್ಲಿ ಪಕ್ಷದ ಶಾಸಕರು, ನಾಯಕರನ್ನು ಕೇಳುತ್ತಿಲ್ಲ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರೇ ನಿರ್ಣಯಿಸುತ್ತಾರೆ ಎಂದರು.

ಮಂಡ್ಯದಲ್ಲಿ ಹಿಂದೆ ಲೋಕಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೇಡ ಎಂದಿದ್ದಕ್ಕೆ ಪಕ್ಷ ವರಿಷ್ಠರು ನನ್ನ ಮೇಲೆ ಕೆಂಗಣ್ಣು ಬೀರಿ, ಪಕ್ಷದ ಕಾರ್ಯಕ್ರಮಗಳಿಂದ ದೂರ ಇರಿಸಿದ್ದು ನಾಲ್ಕು ವರ್ಷಗಳಿಂದ ನನ್ನನ್ನು ದೂರ ಇರಿಸಲಾಗಿದೆ ಎಂದರು.

ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮೊಸಳೆ ಮೇಲಿನ ಸವಾರಿಯಾಗಿದೆ ಎಂದರು.

ನನ್ನ ಮುಂದಿನ ರಾಜಕೀಯ ನಿರ್ಧಾರ ಎರಡು ದಿನಗಳಲ್ಲಿ ತಿರ್ಮಾನ ಪ್ರಕಟಿಸುವೆ ಎಂದು ನುಡಿದರು.

ವಿಧಾನ ಪರಿಷತ್ತು ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ಅಂಗೀಕರಿಸಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಮರಿತಿಬ್ಬೇಗೌಡ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ನಿಯಮದಂತೆ ರಾಜೀನಾಮೆ ಅಂಗೀಕರಿಸಿದ್ದು, ಇಂದಿನಿಂದ ಅವರು ಪರಿಷತ್ತು ಸದಸ್ಯರಲ್ಲ. ನನ್ನ ಅವಧಿಯಲ್ಲಿ ಒಟ್ಟು 11 ಜನ ಸದಸ್ಯರು ರಾಜೀನಾಮೆ ನೀಡಿದ್ದು ಇದೊಂದು ದಾಖಲೆಯಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೊಬ್ಬ ಸದಸ್ಯರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದರಾದರೂ ಅವರು ಯಾರು ಎಂದು ಹೇಳಲಿಲ್ಲ.