ಆನೇಕಲ್ : ಇಬ್ಬರ ಜೊತೆಗೆ ಮದುವೆಯಾಗಿ ಮತ್ತೊಬ್ಬಳ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಸಿಕ್ಕಿ ಬಿದ್ದ ಕಾಮುಕನಿಗೆ ಹುಡುಗಿಯ ಮನೆಯವರು ಹಾಗೂ ಮೊದಲ ಪತ್ನಿ ಧರ್ಮದೇಟು ನೀಡಿದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ ಎಂಬಾತ ಹೀಗೆ ಹೆಣ್ಣುಮಕ್ಕಳ ಬಾಳಲ್ಲಿ ಆಟ ಆಡಲು ಹೋಗಿ ಪೆಟ್ಟು ತಿಂದಿದ್ದಾನೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಈತನಿಗೆ ಮದುವೆ ಆಗೋದೆ ಬಿಸಿನೆಸ್ ಆಗಿತ್ತು. ಇವನ ಚಪಲಕ್ಕೆ ಇಡೀ ಕುಟುಂಬವೇ ಸಾಥ್ ಕೊಡುತ್ತಿತ್ತು ಎಂದು ತಿಳಿದು ಬಂದಿದೆ.
2024ರ ಜನವರಿಯಲ್ಲಿ ರವಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಸ್ವಲ್ಪ ದಿನಗಳ ಬಳಿಕ ಕಂಡ ಕಂಡ ಹೆಣ್ಣುಮಕ್ಕಳ ದೇಹದ ಬಗ್ಗೆ ಪತ್ನಿಯ ಜೊತೆ ವರ್ಣನೆ ಮಾಡುತ್ತಿದ್ದ. ವರದಕ್ಷಿಣೆ ತೆಗೆದುಕೊಂಡು ಬಾ, ನಿನ್ನ ಸ್ನೇಹಿತರನ್ನು ಮನೆಗೆ ಕರೆಸು ಎನ್ನುತ್ತಿದ್ದ. ಇದರಿಂದ ಮೊದಲನೇ ಪತ್ನಿ ಬೇಸತ್ತಿದ್ದಳು.
ಇನ್ನೂ ಪತ್ನಿ ಗರ್ಭಿಣಿಯಾದಾಗ ಮತ್ತೆ ಹುಡುಗಿ ನೋಡೋಕೆ ಶುರು ಮಾಡಿದ್ದ. ತನಗೆ ಮದುವೆ ಆಗಿಲ್ಲ ಎಂದು ತನ್ನ ಕುಟುಂಬದವರ ಜೊತೆ ಊರೂರು ಸುತ್ತುತ್ತಿದ್ದ. ಕಳೆದ ಅಕ್ಟೋಬರ್ನಲ್ಲಿ ಮತ್ತೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದ. ಈ ವಿಚಾರ ಮೊದಲ ಪತ್ನಿಗೆ ತಿಳಿದಿತ್ತು. ಬಳಿಕ ಎಂಗೇಜ್ಮೆಂಟ್ ಆದ ಹುಡುಗಿ ಕುಟುಂಬಕ್ಕೆ ವಿಚಾರ ತಿಳಿಸಿದ್ದರು. ಆಗ ರವಿ ಮನೆಗೆ ಬಂದ ಹುಡುಗಿ ಕುಟುಂಬದವರು ಧರ್ಮದೇಟು ನೀಡಿದ್ದರು.
2025ರ ಡಿಸೆಂಬರ್ನಲ್ಲಿ ಮೊದಲ ಪತ್ನಿ ಹೆರಿಗೆಗೆ ಹೋದಾಗ, ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಮತ್ತೋರ್ವ ಯುವತಿಯನ್ನು ಮದುವೆಯಾಗಿದ್ದ. ಎರಡನೇ ಮದುವೆ ವಿಚಾರ ತಿಳಿದು ರವಿ ಮನೆಗೆ ಹೋಗಿದ್ದ ಮೊದಲ ಪತ್ನಿ ಹಾಗೂ ಕುಟುಂಬಸ್ಥರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ರವಿ ವಂಚನೆ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ.














