ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ನಿನ್ನೆ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ, ಹುಟ್ಟೂರಾದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ ನ ನಿವಾಸಕ್ಕೆ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ನಿವಾಸದಿಂದ ತೆರೆದ ವಾಹನದಲ್ಲಿ ಕಲ್ಲುಬಾಳು ರಸ್ತೆ ಮೂಲಕ ಜಿಗಣಿಯ ಒಡಿಸಿ ಸರ್ಕಲ್, ಜಿಗಣಿ ರಸ್ತೆ ಮೂಲಕ ಹರಪನ್ನಹಳ್ಳಿ – ಕೊಪ್ಪ ಗೇಟ್ – ಬೇಗಿಹಳ್ಳಿ – ಬನ್ನೇರುಘಟ್ಟ ರಸ್ತೆ – ನೈಸ್ ರೋಡ್ – ಕೂಡ್ಲುಗೇಟ್ ಮೂಲಕ ಸೋಮಸುಂದರಪಾಳ್ಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತ್ಯಕ್ರಿಯೆ ನೆರವೇರಿದೆ.
ಬೆಂಗಳೂರಿನ ಸೋಮಸುಂದರಪಾಳ್ಯದ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಎಂ.ವಿ ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಅಂತಿಮ ವಿಧಿವಿಧಾನ ಪೂರೈಸಿದರು.
ಭಾರತೀಯ ಸೇನೆಯಿಂದ ಕುಶಾಲ ತೋಪು ಸಿಡಿಸಿದ ಸೇನಾಧಿಕಾರಿಗಳು, ಎಂ.ವಿ ಪ್ರಾಂಜಲ್ ಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಪ್ರಾಂಜಲ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣಧ್ವಜವನ್ನು ಪೋಷಕರಿಗೆ ಹಸ್ತಾಂತರಿಸಿದರು.