ಪ್ರಯಾಣಿಕರ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರೀಮಿಯಂ ಕಾರುಗಳತ್ತ ಗಮನಹರಿಸುತ್ತಿದ್ದು, ಇದೀಗ ತನ್ನ ಬಹುನೀರಿಕ್ಷಿತ ಜಿಮ್ನಿ ಆಫ್ ರೋಡ್ ಎಸ್ ಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ರೂ. 15.05 ಲಕ್ಷ ಬೆಲೆ ಹೊಂದಿದೆ.
ಹೊಸ ಜಿಮ್ನಿ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಕಡಿಮೆ ಬೆಲೆ ಜೊತೆಗೆ ವಿನೂತನ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ವಿಶೇಷವಾಗಿ ಆಫ್ ರೋಡ್ ಪ್ರಿಯರಿಗಾಗಿ ನಿರ್ಮಾಣಗೊಂಡಿರುವ ಹೊಸ ಕಾರು ಯುವಕರ ಹಾಟ್ ಫೇವರಿಟ್ ಆಗಲಿದೆ. ಹೊಸ ಕಾರು ಖರೀದಿಗಾಗಿ ಇದುವರೆಗೆ ಸುಮಾರು 30 ಸಾವಿರ ಗ್ರಾಹಕರು ಬುಕಿಂಗ್ ದಾಖಲಿಸಿದ್ದು, ಈ ತಿಂಗಳಾಂತ್ಯಕ್ಕೆ ನೆಕ್ಸಾ ಶೋರೂಂಗಳಲ್ಲಿ ವಿತರಣೆ ಆರಂಭವಾಗಲಿದೆ.
ವೆರಿಯೆಂಟ್ ಗಳು ಮತ್ತು ಎಂಜಿನ್
ಜಿಮ್ನಿ ಎಸ್ ಯುವಿ ಕಾರು ಜೆಟಾ ಮತ್ತು ಅಲ್ಫಾ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಫೋರ್ ಸಿಲಿಂಡರ್ ಕೆ15ಬಿ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿದೆ. ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇವು 103.4 ಹಾರ್ಸ್ ಪವರ್ ಮತ್ತು 134.2 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇವು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 16.94 ಕಿ.ಮೀ ಮೈಲೇಜ್ ನೀಡುತ್ತವೆ.
ಇದರೊಂದಿಗೆ ಹೊಸ ಜಿಮ್ನಿ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಮ್ಯಾನುವಲ್ ಆವೃತ್ತಿಯಲ್ಲಿ ಆಲ್ ಗ್ರಿಪ್ ಪ್ರೊ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದ್ದು, ಲೋ ರೇಂಜ್ ಗೇರ್ ಬಾಕ್ಸ್ ನಲ್ಲಿ 2ಡಬ್ಲ್ಯುಡಿ ಹೈ, 4 ಡಬ್ಲ್ಯುಡಿ ಹೈ ಮತ್ತು 4ಡಬ್ಲ್ಯು ಲೋ ಮಾಡೆಲ್ ಗಳು ಖರೀದಿಗೆ ಲಭ್ಯವಿವೆ. ಹಾಗಾಯೇ ಹೊಸ ಕಾರು ಲ್ಯಾಡರ್ ಫ್ರೇಮ್ ಚಾರ್ಸಿಸ್ ಆಧರಿಸಿ ನಿರ್ಮಾಣಗೊಂಡಿದ್ದು, ಇದು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಕಡಿದಾದ ಭೂಪ್ರದೇಶಗಳಲ್ಲೂ ಸರಾಗವಾಗಿ ನುಗ್ಗುವ ಸಾಮರ್ಥ್ಯ ಹೊಂದಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಸ್ಪೋರ್ಟಿ ವಿನ್ಯಾಸ ಹೊಂದಿರುವ ಹೊಸ ಜಿಮ್ನಿ ಕಾರು ಒಟ್ಟು 3,985 ಎಂಎಂ ಉದ್ದಳತೆಯೊಂದಿಗೆ 1,645 ಎಂಎಂ ಅಗಲ, 1,720 ಎಂಎಂ ಎತ್ತರ ಮತ್ತು 2,590 ವ್ಹೀಲ್ ಬೆಸ್ ಪಡೆದುಕೊಂಡಿದ್ದು, ಸಿಗ್ನೆಚರ್ ಜಿಮ್ನಿ ಗ್ರಿಲ್, ಫ್ಲಾಟ್ ಆಗಿರುವ ಕ್ಲಾಮ್‌ಶೆಲ್ ಬಾನೆಟ್, ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ ವಾಷರ್, 15 ಇಂಚಿನ ಅಲಾಯ್ ವ್ಹೀಲ್ ಜೊತೆಗೆ 195/80 ಅಳತೆಯ ಆಫ್ ರೋಡ್ ಟೈಯರ್ ಜೋಡಣೆ ಹೊಂದಿದೆ. ಹಾಗೆಯೇ ಹೊಸ ಕಾರಿನ ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಆಫ್ ರೋಡ್ ಕೌಶಲ್ಯತೆಗೆ ಪೂರಕವಾಗಿದೆ.
ಜೊತೆಗೆ ಹೊಸ ಕಾರಿನ ಒಳಭಾಗದ ವಿನ್ಯಾಸ ಕೂಡಾ ಗ್ರಾಹಕರನ್ನು ಸೆಳೆಯಲಿದ್ದು, ಆಫ್ ರೋಡ್ ಪ್ರಯಾಣಕ್ಕೆ ಪೂರಕವಾದ ಆಸನ ಸೌಲಭ್ಯದೊಂದಿಗೆ 9 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಪ್ಲಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಂ ಜೋಡಣೆ ಹೊಂದಿದೆ.
ಸುರಕ್ಷಾ ಸೌಲಭ್ಯಗಳು
ಹೊಸ ಕಾರುಗಳಲ್ಲಿ ಸುರಕ್ಷತೆಗೆ ಮಾರುತಿ ಸುಜುಕಿ ಕಂಪನಿ ಇತ್ತೀಚೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬಜೆಟ್ ಬೆಲೆಯೊಂದಿಗೆ ಕಾರಿನ ಸುರಕ್ಷಾ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ. ಇದೀಗ ಬಿಡುಗಡೆಯಾಗಿರುವ ಜಿಮ್ನಿ ಕಾರಿನಲ್ಲೂ ಕೂಡಾ ಹಲವಾರು ಸುರಕ್ಷಾ ಫೀಚರ್ಸ್ ಜೋಡಣೆ ಮಾಡಿದ್ದು, ಹೊಸ ಕಾರಿನಲ್ಲಿ ಆರು ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೊಗ್ರಾಂ, ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫ್ರೆಷನ್ಷಲ್, ಹಿಲ್ ಹೋಲ್ಡ್ ಕಂಟ್ರೊಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯಲ್ ವ್ಯೂ ಕ್ಯಾಮೆರಾ ಸೌಲಭ್ಯಗಳಿವೆ.