ಬೆಂಗಳೂರು(Bengaluru): ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡಿದಿದ್ದು, ಮೇ 13ರಂದು ನೆಲಮಂಗಲ ಸಮೀಪ ಜೆಡಿಎಸ್ ಮಹತ್ವಾಕಾಂಕ್ಷೆಯ ‘ಜನತಾ ಜಲಧಾರೆ’ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು
ಆ ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಸುಮಾರು 4-5 ಲಕ್ಷ ಜನ ಸೇರಲಿದ್ದಾರೆ. ಬೆಂಗಳೂರು ನಗರದ ನಾಗರೀಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಸಮಾರೋಪ ಹಮ್ಮಿಕೊಳ್ಳಲಾಗಿದೆ. ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು – ಹಾಸನ ಹೆದ್ದಾರಿಯ ಪಕ್ಕದ ಬೃಹತ್ ಮೈದಾನದಲ್ಲಿ ಮೇ 13ರಂದು ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದೆ ಎಂದು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ ಅವರು, ಧರ್ಮದ ದಂಗಲ್ ಹೆಸರಿನಲ್ಲಿ ಸರ್ವ ಜನಾಂಗದ ಶಾಂತಿ ತೋಟದಲ್ಲಿ ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ನಮ್ಮ ರಾಜ್ಯ ಉತ್ತರ ಪ್ರದೇಶ ಗುಜರಾತ್ ಆಗಲು ಬಿಡಲ್ಲ. ನಮ್ಮ ನೆಲದ ಪರಂಪರೆಗೆ ಧಕ್ಕೆ ಆಗದಂತೆ ಸಮಾವೇಶವನ್ನು ಆಯೋಜಿಸಿದ್ದೇವೆ ಎಂದರು.
ಜಲಧಾರೆ ಕಾರ್ಯಕ್ರಮದಲ್ಲಿ ಸಂಜೆ 6.30 ಗಂಟೆಗೆ ಗಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ 20 ಜನ ಪಂಡಿತರ ತಂಡ ವಾರಣಾಸಿಯಿಂದ ಬರುತ್ತಿದ್ದಾರೆ. ಸಮಾವೇಶದಲ್ಲಿ ಈ ಅಂಶ ಬಹಳ ಮಹತ್ವದ್ದು ಎಂದು ಅವರು ತಿಳಿಸಿದರು.
180 ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗಿದೆ. ಅಷ್ಟೂ ಕಡೆ ಜಲಧಾರೆ ಕಾರ್ಯಕ್ರಮ ನಡೆದಿದೆ. 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು ಎಂದರು ಅವರು.
ನೆಲಮಂಗಲ ಮೈದಾನದಿಂದಲೇ 2023ರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಬೆಂಗಳೂರಿಂದ ಹಾಸನ , ಶಿವಮೊಗ್ಗ ಕಡೆ ಪ್ರಯಾಣ ಮಾಡುವ ಜನರಿಗೆ ಸ್ವಲ್ಪ ತೊಂದರೆ ಆಗಬಹುದು. ಅದಕ್ಕೆ ಪರ್ಯಾಯ ರಸ್ತೆ ಬಳಕೆ ಮಾಡುವಂತೆ ಮನವಿ ಮಾಡಿದರು.