ಮನೆ ಸ್ಥಳೀಯ ಚಾಮುಂಡಿಬೆಟ್ಟದಲ್ಲಿ ಸೆಕ್ಯೂರಿಟಿ ಸಿಬ್ಬಂದಿಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ: ಹಣ ನೀಡಿದರೆ ಮಾತ್ರ ವಿಐಪಿ ದರ್ಶನ

ಚಾಮುಂಡಿಬೆಟ್ಟದಲ್ಲಿ ಸೆಕ್ಯೂರಿಟಿ ಸಿಬ್ಬಂದಿಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ: ಹಣ ನೀಡಿದರೆ ಮಾತ್ರ ವಿಐಪಿ ದರ್ಶನ

0

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವ ಚಾಮುಂಡಿ ಬೆಟ್ಟದಲ್ಲಿ ಸರ್ವ ರೀತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Join Our Whatsapp Group

ಚಾಮುಂಡಿ ಬೆಟ್ಟದಲ್ಲಿ ಪ್ರತಿ ವರ್ಷ ಸೆಕ್ಯೂರಿಟಿ ಏಜನ್ಸಿಯನ್ನು ಬದಲಾವಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷವು ಬದಲಾವಣೆ ಮಾಡಲಾಗಿದೆ.

ನಿಯಮದ ಪ್ರಕಾರ ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಬದಲಾವಣೆ ಮಾಡಿ, ಹೊಸ ಸಿಬ್ಬಂದಿಗಳನ್ನು ನೇಮಿಸಬೇಕು. ಆದರೆ ಅಧಿಕಾರಿಗಳು ಲಂಚ ಪಡೆದುಕೊಂಡು ಈಗಿರುವ ಸಿಬ್ಬಂದಿಗಳನ್ನೇ ಮರು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಲಾಗಿದೆ.

ಸೆಕ್ಯೂರಿಟಿ ಸಿಬ್ಬಂದಿಯಾಗಿ ದುಡಿಯಲು ಎಲ್ಲರಿಗೂ ಅವಕಾಶ ನೀಡಬೇಕು. ಆದರೆ ಪ್ರತಿ ಬಾರಿಯೂ ಹಳಬರಿಗೆ ಅವಕಾಶ ನೀಡಲಾಗುತ್ತಿದೆ.

ಹಳಬರನ್ನು ತೆಗೆದುಕೊಂಡಾಗ ಗೇಟ್ ಗಳಲ್ಲಿ ಹಾಗೂ ದೇವಸ್ಥಾನದಲ್ಲಿ ದಬ್ಬಾಳಿಕೆಗಳು, ಜಗಳಗಳು ಪ್ರವಾಸಿಗರ ಮೇಲೆ ನಿರಂತರವಾಗಿ ನಡೆಯುತ್ತವೆ.

ಈ ಹಿಂದೆಯೂ ಗಲಾಟೆಗಳು ನಡೆದಿದ್ದು, ಸೆಕ್ಯೂರಿಟಿ ಸಿಬ್ಬಂದಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವ ಕುರಿತು ಕೆ.ಆರ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

ಪೊಲೀಸಿನವರ  ಮೇಲೆಯೂ ಸೆಕ್ಯೂರಿಟಿ ಸಿಬ್ಬಂದಿ ಹಲ್ಲೆ ಮಾಡಿದ್ದು, ಅವರ ಮೇಲೆ ಎಫ್ ಐ ಆರ್ ಆಗಿದೆ. ಆದರೆ ಆರೋಪಿತರ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು, ದುಡ್ಡು ಪಡೆದು ಅವರನ್ನೇ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ.

ಚಾಮುಂಡಿ ಬೆಟ್ಟದ E.O ಕೃಷ್ಣ (94801 69415) ಹಾಗೂ ಅಲ್ಲಿನ ಅಧಿಕಾರಿಗಳು ಲಂಚ ತೆಗೆದುಕೊಂಡು ಕಳಂಕಿತರನ್ನೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಣವಿದ್ದರೇ ಚಾಮುಂಡಿ ದೇವಿಯ ನೇರ ದರ್ಶನ:

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ (88671 95439) ಎಂಬ ಮಣೆಗಾರ್  (Protocal Incharge) ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಸರ್ಕಾರಿ ನಿಯಮದಂತೆ ಇರುವ ನೇರ ದರ್ಶನ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ಪ್ರತಿ ತಿಂಗಳು ಲಕ್ಷಾಂತರ  ಹಣವನ್ನು ಸಾರ್ವಜನಿಕರ ಮೂಲಕ ದರ್ಶನ ಮತ್ತು ಪೂಜೆಯ ಹೆಸರಿನಲ್ಲಿ ಹಣ ಮಾಡಿಕೊಂಡಿರುತ್ತಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

ಮಣೆಗಾರ್ ಮತ್ತು ಸೆಕ್ಯೂರಿಟಿ ಸಿಬ್ಬಂದಿಗಳಿಂದ ಪ್ರತಿ ದಿನ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಕೃಷ್ಣ ಸೇರಿದಂತೆ ಅವರ ಕಛೇರಿಯ ಸಿಬ್ಬಂದಿಗಳು ಲಂಚ ಪಡೆದು ಈ ಭ್ರಷ್ಟಾಚಾರದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರಾದ ರ‍್ಯಾಬಿಟ್ ಅಲೋಕ್ ರವರು ಹಲವಾರು ದಾಖಲೆಗಳನ್ನು ಮತ್ತು ಮಾಹಿತಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಈ ಕೂಡಲೇ ಗಮನ ಹರಿಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಿ ನಾಡ ದೇವಿಯ ಸನ್ನಿಧಿಯನ್ನು ಭ್ರಷ್ಟಾಚಾರ ಮುಕ್ತ ಗೊಳಿಸಬೇಕಾಗಿದೆ ಎಂಬುದು ಸಾರ್ವಜನಿಕರ ಮನವಿಯಾಗಿದೆ.