ಮನೆ ರಾಜ್ಯ ರಾಜ್ಯ ಸರ್ಕಾರದ ವಿರುದ್ಧ ಆ.23ರಂದು ಬೃಹತ್​ ಪ್ರತಿಭಟನೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದ ವಿರುದ್ಧ ಆ.23ರಂದು ಬೃಹತ್​ ಪ್ರತಿಭಟನೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

0

ಬೆಂಗಳೂರು: ಗುತ್ತಿಗೆದಾರರ ಕಮಿಷನ್​, ವರ್ಗಾವಣೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್​ 23 ರಂದು ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಾಂಗ್ರೆಸ್​ನ ಪಂಚ ಯೋಜನೆಗಳು ಕೇವಲ ಹೆಸರಿಗೆ ಮಾತ್ರ. ಕೊಟ್ಟ ಭರವಸೆಯನ್ನು ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಹೇಳಿದರು.

ಮೂರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಜನರು ಬೇಸತ್ತು ಹೋಗಿದ್ದಾರೆ. ತಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯವನ್ನು ಆರ್ಥಿಕವಾಗಿ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಪ್ರಮುಖವಾಗಿ ಈ ಸರ್ಕಾರದಲ್ಲಿ ಡಿಕ್ಟೇಟರ್ ಶಿಪ್​ ನಡವಳಿಕೆ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಶಾಸಕರು ಬಿಜೆಪಿ ಪಕ್ಷ ತೊರೆಯುತ್ತಾರೆ ವಿಚಾರವಾಗಿ ಮಾತನಾಡಿ, ಬಿಜೆಪಿಯ ಯಾವುದೇ ಶಾಸಕರು ಪಕ್ಷವನ್ನು ತೊರೆಯುವುದಿಲ್ಲ. ಸ್ಥಳೀಯವಾಗಿ ಕೆಲವು ಸಮಸ್ಯೆಗಳಿವೆ. ನಾವು ಇದನ್ನು ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಒಳಗೊಂಡಿದೆ. ತಮ್ಮದೇ ಶಾಸಕರು ದಂಗೆ ಎದ್ದಿದ್ದಾರೆ ಎಂಬ ಸತ್ಯವನ್ನು ಮರೆಮಾಚಲು ಅವರು ಪಕ್ಷಾಂತರ ಬಗ್ಗೆ ಸುಳ್ಳು ಕಥೆಗಳನ್ನು ಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಿಂದಿನ ಲೇಖನದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ವಾಹನ ಸವಾರೆ ಸಾವು
ಮುಂದಿನ ಲೇಖನನಮ್ಮವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ: ಡಿ.ವಿ ಸದಾನಂದಗೌಡ