ಮನೆ ಸ್ಥಳೀಯ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ

ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ

0

ಮೈಸೂರು: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.

ನಂಜನಗೂಡಿನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರದ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ನಾಲೆಗಳಲ್ಲಿ ಹೂಳು ತೆಗೆದಿಲ್ಲ, ಗಿಡ ಗಂಟೆಗಳನ್ನು ತೆರವು ಮಾಡಿಲ್ಲ. ಕಬಿನಿ ಬಲದಂಡೆ ಮತ್ತು ಎಡದಂಡೆ ಹಾಗೂ ನುಗು ನಾಲೆಗಳ ಕಡೆಯ ಭಾಗದ ರೈತರ ಜಮೀನುಗಳಿಗೆ ನೀರು ಬಿಟ್ಟಿಲ್ಲ. ಆದರೆ ತಮಿಳುನಾಡಿಗೆ ಕಪಿಲಾ ನದಿ ಮೂಲಕ ನೀರು ಹರಿದು ಹೋಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ರೈತರು ಬೆಳೆ ಬೆಳೆಯಲು ನೀರು ಇಲ್ಲ. ಸಮರ್ಪಕವಾಗಿ ಗೇಟ್​ಗಳನ್ನು ಅಳವಡಿಸದೆ ರೈತರ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸುವ ತನಕ ಹೋರಾಟ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ನಾಲೆಗಳಿಗೆ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ. ಭತ್ತದ ಬೆಳೆ ಬೆಳೆಯಲು ಅನ್ನದಾತರು ಕಾದು ಕುಳಿತಿದ್ದಾರೆ. ಭತ್ತದ ಬೆಳೆಗೆ ಸಮಯವೂ ಮೀರುತ್ತಿರುವುದರಿಂದ ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. ಜಲಾಶಯಗಳು ತುಂಬಿದ್ದರೂ ನಾಲೆಗಳಿಗೆ ನೀರು ಬಿಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹುಣಸೂರು, ಕೆ.ಆರ್. ನಗರ ಭಾಗದಲ್ಲೂ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.