ಬೆಂಗಳೂರು: ಇಂದು ಕ್ರೀಡಾ ಪ್ರೇಮಿಗಳಿಗೆ ಬಹು ನಿರೀಕ್ಷಿತ ಕ್ಷಣ. ಐಪಿಎಲ್ 2025ರ 18ನೇ ಆವೃತ್ತಿಯ ಮಹತ್ವಪೂರ್ಣ ಫೈನಲ್ ಪಂದ್ಯ ಇಂದು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪಂಜಾಬ್ ಕಿಂಗ್ಸ್ (ಪಿಕೆಬಿಎಸ್) ವಿರುದ್ಧ ಮೈದಾನಕ್ಕಿಳಿಯುತ್ತಿರುವ ಸಂದರ್ಭದಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಸಿಬಿಗೆ ವಿಶೇಷ ಶುಭ ಹಾರೈಸಿದ್ದಾರೆ.
ಸಿಎಂ ಅವರು ಟ್ವೀಟ್ ಮೂಲಕ ತಮ್ಮ ಹಾರೈಕೆಯನ್ನು ವ್ಯಕ್ತಪಡಿಸಿದ್ದು, “ಆರ್‌ಸಿಬಿ ತಂಡದ ಸೋಲು – ಗೆಲುವು, ಏಳು – ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ – ಸ್ಫೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎಂಬುದು ನನ್ನ ಹಾರೈಕೆ” ಎಂದು ಬರೆದಿದ್ದಾರೆ.
ಐಪಿಎಲ್ ಆರಂಭಗೊಂಡ 2008ರಿಂದಲೇ ಆರ್‌ಸಿಬಿ ತಂಡಕ್ಕೆ ವಿಶೇಷ ಬೆಂಬಲವಿದೆ. ಈ ತಂಡವು ಈವರೆಗೆ ಮೂರು ಬಾರಿ ಫೈನಲ್ ಗೆ ತಲುಪಿದರೂ, ಕಪ್ ಗೆಲ್ಲಲಾಗಿರಲಿಲ್ಲ. ಆದರೆ, ಈ ಬಾರಿ ತಂಡವು ಉತ್ತಮ ಪ್ರದರ್ಶನ ನೀಡಿ ಫೈನಲ್ ಗೆ ಪ್ರವೇಶಿಸಿದೆ.
ಸಿದ್ದರಾಮಯ್ಯ ಅವರ ಹಾರೈಕೆ ಕೇವಲ ಕ್ರಿಕೆಟ್ ಪ್ರೀತಿಯಲ್ಲ, ಅದು ಕನ್ನಡಿಗರ ಆತ್ಮೀಯತೆಯ ಪ್ರತೀಕವೂ ಹೌದು. “ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ”, ಈ ಮಾತು ಹೇಳುತ್ತಾ, ಸಿಎಂ ಅವರು ಆರ್‌ಸಿಬಿ ಅಭಿಮಾನಿಗಳ ನಿರಂತರ ಬೆಂಬಲವನ್ನು ಗೌರವಿಸಿ, ಈ ಸಲ ಕಪ್ ಬೆಂಗಳೂರಿಗೇ ಬರಲಿ ಎಂದು ಆಶಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಲ್ಲೂ ಆರ್‌ಸಿಬಿ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಅಂಗಡಿಗಳಲ್ಲಿ ಜರ್ಸಿ, ಬ್ಯಾನರ್, ಧ್ವಜಗಳ ಮಾರುಕಟ್ಟೆ ಜೋರಾಗಿ ನಡೆಯುತ್ತಿದೆ. ವಿವಿಧೆಡೆಗಳಲ್ಲಿ ಪಬ್ಲಿಕ್ ವೀಕ್ಷಣಾ ವ್ಯವಸ್ಥೆ ಕೂಡ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹ್ಯಾಷ್‌ಟ್ಯಾಗ್ #RCBFinal #EeSalaCupNamde ಮತ್ತೆ ಟ್ರೆಂಡಿಂಗ್ ಆಗಿದೆ.















