ಮನೆ ರಾಜ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತ ರತ್ನ ಸಿಗಲಿ: ರಣದೀಪ್‌ ಸುರ್ಜೇವಾಲ

ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತ ರತ್ನ ಸಿಗಲಿ: ರಣದೀಪ್‌ ಸುರ್ಜೇವಾಲ

0

ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನಿಜಕ್ಕೂ ಮರಣೋತ್ತರ ಭಾರತ ರತ್ನ ಸಿಗಬೇಕು. ಈ ಗೌರವಕ್ಕೆ ಅವರಂತಹ ಅರ್ಹರು ಮತ್ತೊಬ್ಬರಿಲ್ಲ. ಅವರಿಗೆ ಈ ಹಿಂದೆಯೇ ಈ ಗೌರವ ಸಿಗಬೇಕಿತ್ತು. ಅನ್ನ, ಶಿಕ್ಷಣ ನೀಡಿ ಲಕ್ಷಾಂತರ ಮಂದಿಗೆ ಆಸರೆಯಾಗಿ ನಿಂತ ಮಹಾತ್ಮರು ಅವರಾಗಿದ್ದಾರೆ. ಸಿದ್ಧಗಂಗಾ ಶ್ರೀಗಳು ಇಡೀ ದೇಶಕ್ಕೇ ಮಾದರಿಯಾಗಿದ್ದವರು. ಹೀಗಾಗಿ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆದ್ಯತೆ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ರಣದೀಪ್ ಸುರ್ಜೇವಾಲ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಈ ಶತಮಾನ ಕಂಡ ಅಪರೂಪದ ಶರಣರಾಗಿದ್ದವರು. ಶ್ರೀಗಳು ಅನ್ನ,ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದವರು. ಯಾವುದೇ ಜಾತಿ, ಧರ್ಮ ಭೇದ ಇಲ್ಲಿಲ್ಲ. ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಸಹಾಯ ಬೇಡಿ ಬಂದ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆಹಾರ ನೀಡಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಹಾಗೂ ಹೆಸರನ್ನು ಗಳಿಸುವಂತೆ ಮಾಡಿದವರು ಅವರು ಎಂದು ಹೇಳಿದ್ದಾರೆ.

ನಡೆದಾಡುವ ದೇವರಿಗೆ ಸಿಗಲಿ ಗೌರವ
ಶತಾಯುಷಿಗಳಾಗಿರುವ ಅವರು ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದರು. ಜನರು ಶಿವಕುಮಾರ ಸ್ವಾಮೀಜಿಯಲ್ಲಿ ದೇವರನ್ನು ಕಂಡಿದ್ದಾರೆ. ದೇವರು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದರೆ, ಈ ನಮ್ಮ ನಡೆದಾಡುವ ದೇವರು ಎಲ್ಲವನ್ನೂ ಮಾಡಿ ತೋರಿಸಿದ್ದಾರೆ. ಆರಂಭದಲ್ಲಿ ಶ್ರೀಮಠದ ಆದಾಯ ಕಡಿಮೆ ಇದ್ದಾಗಲೂ ಕುಗ್ಗದ ಶ್ರೀಗಳು, ಭಕ್ತರ ಮನೆ ಮನೆಗೆ ತೆರಳಿ ದವಸ-ಧಾನ್ಯಗಳನ್ನು ಭಿಕ್ಷೆ ಎತ್ತಿ ಮಠವನ್ನು ನಿರ್ವಹಿಸಿದರು. ಮಠದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಇಂಥವರು ಸಿಗುವುದೇ ಅಪರೂಪ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಅಭಿಪ್ರಾಯಪಟ್ಟಿದ್ದಾರೆ.

ಇದು ಆರೂವರೆ ಕೋಟಿ ಕನ್ನಡಿಗರ ಭಾವನೆ
ನಿಜವಾಗಿಯೂ ಭಾರತದ ಅಮೂಲ್ಯ ರತ್ನವಾಗಿರುವಂಥ ಕರ್ನಾಟಕದ ಈ ಮಹಾನ್‌ ಪುರುಷ, ಅವತಾರ ಪುರುಷರಾಗಿರುವ ಶಿವಕುಮಾರ್‌ ಶ್ರೀಗಳಿಗೆ ಕೇಂದ್ರ ಸರ್ಕಾರವು ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ಎಂಬುದು ನನ್ನ ಭಾವನೆಯಾಗಿದೆ. ಇದು ಆರೂವರೆ ಕೋಟಿ ಕನ್ನಡಿಗರ ಅಭಿಮತವೂ ಆಗಿದೆ ಎಂಬುದು ನನ್ನ ಅನ್ನಿಸಿಕೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.