ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದ್ದು, ಜನವರಿ 1ರವರೆಗೆ ಎಲ್ಲಾ ಬಗೆಯ ಪಟಾಕಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಹಸಿರು ಪಟಾಕಿ ಸೇರಿದಂತೆ ಎಲ್ಲಾ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವುದಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಸೋಮವಾರ ಘೋಷಿಸಿದ್ದಾರೆ.
ಚಳಿಗಾಲದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗುತ್ತದೆ ಮತ್ತು ಪಟಾಕಿಗಳನ್ನು ಸಿಡಿಸುವುದರಿಂದ ಮತ್ತಷ್ಟು ಹೆಚ್ಚಲಿದೆ. ಕಳೆದ ವರ್ಷದಂತೆ ಈ ಬಾರಿಯೂ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಇದರಿಂದ ಜನರನ್ನು ಮಾಲಿನ್ಯದಿಂದ ಸ್ವಲ್ಪ ಮಟ್ಟಿಗೆ ಕಾಪಾಡಬಹುದು.
ಯಾವುದೇ ರೀತಿಯ ಪಟಾಕಿಗಳ ಆನ್‌ಲೈನ್ ವಿತರಣೆ ಅಥವಾ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜನರು ದೀಪಗಳನ್ನು ಹಚ್ಚಿ ಸಿಹಿ ಹಂಚುವ ಮೂಲಕ ದೀಪಾವಳಿ ಆಚರಿಸಬೇಕೆಂದು ಬಯಸುತ್ತೇವೆ ಎಂದು ರೈ ಹೇಳಿದರು.
ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಕಂದಾಯ ಇಲಾಖೆಯನ್ನು ಒಳಗೊಂಡ ಜಂಟಿ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದರು.