ಮನೆ ಕಾನೂನು ದರ್ಶನ್‌, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

ದರ್ಶನ್‌, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

0

ನಟ ದರ್ಶನ್‌ ಮತ್ತು ವಿಜಯಲಕ್ಷ್ಮಿ ಅವರಿಗೆ ಸಂಬಂಧಿಸಿದ ವೈಯಕ್ತಿಕ, ಕೌಟುಂಬಿಕ ಮಾಹಿತಿಯನ್ನಾಗಲಿ ಅಥವಾ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅವಿಶ್ವಾಸಾರ್ಹ ಮಾಹಿತಿ ಅಥವಾ ಅಭಿಪ್ರಾಯಗಳನ್ನಾಗಲಿ ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಿ ಬೆಂಗಳೂರಿನ ಸತ್ರ ನ್ಯಾಯಾಲಯವು ಬುಧವಾರ ಆದೇಶ ಮಾಡಿದೆ.

Join Our Whatsapp Group

ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿರುವ ಮೂಲ ದಾವೆಯ ಭಾಗವಾದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು 10ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ್‌ ಕುಮಾರ್‌ ರೈ ಅವರು ನಡೆಸಿದರು.

“ಒಟ್ಟು 38 ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ವರದಿಗಾರರು, ಸುದ್ದಿ ನಿರೂಪಕರು ಹಾಗೂ ಪ್ರತಿವಾದಿ ಮಾಧ್ಯಮಗಳಿಗೆ ಸಂಬಂಧಿಸಿದ ಯಾರೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ, ಆಕೆಯ ಪತಿ ದರ್ಶನ್‌ ಶ್ರೀನಿವಾಸ್‌ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿಗೆ ಸಂಬಂಧಿಸಿದ ಅವಿಶ್ವಾಸಾರ್ಹವಾದ ಯಾವುದೇ ಸುದ್ದಿ/ಅಭಿಪ್ರಾಯವನ್ನು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು ಎಂದು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ. ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಿ ಜುಲೈ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಎರಡನೇ ಆರೋಪಿಯಾಗಿರುವ ಪತಿ ದರ್ಶನ್‌ ಅವರ ವಿರುದ್ಧ ಅವಿಶ್ವಾಸಾರ್ಹವಾದ ಸುದ್ದಿ/ಅಭಿಪ್ರಾಯ, ಗಾಳಿಸುದ್ದಿ, ತಿರುಚಿದ ಸುದ್ದಿ, ತನ್ನ (ವಿಜಯಲಕ್ಷ್ಮಿ) ಘನತೆಗೆ ಹಾನಿ ಮಾಡುವ ಅಸತ್ಯದ ಸುದ್ದಿಗಳನ್ನು ಪ್ರಸಾರ/ಪ್ರಕಟ ಮಾಡದಂತೆ ವರದಿಗಾರರು, ಸುದ್ದಿ ನಿರೂಪಕರಿಗೆ ನಿರ್ಬಂಧಿಸಬೇಕು ಎಂದು ವಿಜಯಲಕ್ಷ್ಮಿ ಕೋರಿದ್ದಾರೆ.

ಕಾನೂನಾತ್ಮಕವಾಗಿ ದರ್ಶನ್‌ ಅಲಿಯಾಸ್‌ ಅಭಿಮಾನಿಗಳ ನೆಚ್ಚಿನ ಡಿ ಬಾಸ್‌ ಅವರನ್ನು ವರಿಸಿರುವ ನಾನು ನನ್ನ ಮತ್ತು ನನ್ನ ಪತಿ ದರ್ಶನ್‌ ಹಾಗೂ ಕುಟುಂಬದ ಹಕ್ಕು ಮತ್ತು ಘನತೆಯನ್ನು ಸಾರ್ವಜನಿಕವಾಗಿ ಕಾಪಾಡಿಕೊಳ್ಳಬೇಕಿದ್ದು, ಪ್ರತಿವಾದಿ ಮಾಧ್ಯಮಗಳು ಪತಿ ದರ್ಶನ್‌ ಮತ್ತು ಕುಟುಂಬದ ವಿರುದ್ಧ ಸತ್ಯಕ್ಕೆ ದೂರವಾದ ಸುದ್ದಿ ಬಿತ್ತರಿಸುತ್ತಿವೆ. ನನ್ನ ಅಥವಾ ಪತಿ ಹಾಗೂ ಕುಟುಂಬದ ಘನತೆಗೆ ಹಾನಿ ಮಾಡುವ ಮೂಲಕ ಕುಟುಂಬದ ವಿರುದ್ಧ ಸಾರ್ವಜನಿಕರನ್ನು ಪ್ರಭಾವಿಸುವ ಸುಳ್ಳು, ಮಾನಹಾನಿ ಹೇಳಿಕೆ ವರದಿ, ಚಿತ್ರ ಅಥವಾ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧಿಸಬೇಕು ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ತಮ್ಮ ಪತಿ ದರ್ಶನ್‌ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ. ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸುವ ಮೂಲಕ ಪೊಲೀಸರ ಸಂಕಥನ ಮಂಡಿಸುವ ಮೂಲಕ ದುರುದ್ದೇಶಪೂರ್ವಕವಾಗಿ ಪ್ರತಿವಾದಿ ಮಾಧ್ಯಮಗಳು ಪತಿ ದರ್ಶನ್‌ ಅವರನ್ನು ಗುರಿಯಾಗಿಸಿಕೊಂಡಿವೆ. ಮಾಧ್ಯಮಗಳ ಈ ವರ್ತನೆಯು ಮಾಧ್ಯಮ ವಿಚಾರಣೆಯಲ್ಲದೆ ಬೇರೇನೂ ಅಲ್ಲ. ಇಡೀ ಪ್ರಕರಣದಲ್ಲಿ ಪ್ರತಿವಾದಿ ಮಾಧ್ಯಮಗಳು ತಮ್ಮ ಪತಿಯ ಪಾತ್ರವನ್ನು ಪೂರ್ವನಿರ್ಧರಿಸಿದ್ದು, ತನಿಖೆ ಪ್ರಾಥಮಿಕ ಹಂತದಲ್ಲಿರುವಾಗಲೇ ಪತಿ ದರ್ಶನ್‌ ಅವರನ್ನು ಕೊಲೆಗಾರ ಎಂದು ಕರೆಯುವ ಮಟ್ಟಕ್ಕೆ ಹೋಗಿವೆ. ಮುದ್ರಣ ಮತ್ತು ಡಿಜಿಟಲ್‌ ಮಾಧ್ಯಮದಲ್ಲಿ ಪ್ರಕಟವಾಗಿರುವ ಕೆಲವು ವರದಿಗಳಲ್ಲಿ ದರ್ಶನ್‌ ಅವರನ್ನು ನಡತೆಗೆಟ್ಟವರು ಮತ್ತು ಕ್ರಿಮಿನಲ್‌/ಅಪರಾಧಿ ಎಂದು ನಿರ್ಧರಿಸಲಾಗಿದೆ ಎಂದು ವಿಜಯಲಕ್ಷ್ಮಿಯವರ ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ದರ್ಶನ್‌ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಸಕಾರಣವಿಲ್ಲದೇ ಸುದ್ದಿ ಮಾಧ್ಯಮಗಳು ಚರ್ಚೆ ಆರಂಭಿಸಿದ್ದು, ಪತಿಯನ್ನು ಕೆಟ್ಟದಾಗಿ ಬಿಂಬಿಸುತ್ತಿವೆ. ಚರ್ಚೆಯು ರಂಜಕವಾದ ರಾಷ್ಟ್ರೀಯ ಸುದ್ದಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ರಾಜ್ಯದಾದ್ಯಂತ ಕೂಗೆಬ್ಬಿಸಿವೆ. ತನಿಖೆ ಪ್ರಗತಿಯಲ್ಲಿರುವಾಗ ಸುದ್ದಿ ಮಾಧ್ಯಮಗಳು ತನ್ನ ಪತಿಯ ವಿರುದ್ದ ಕೆಟ್ಟ ರೀತಿಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಮೂಲಕ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಆ ಮೂಲಕ ಜನರಲ್ಲಿ ತನ್ನ ಮತ್ತು ದರ್ಶನ್‌ ವಿರುದ್ದ ನಕಾರಾತ್ಮಕ ಅಭಿಪ್ರಾಯ ರೂಪಿಸುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನನ್ನ ಮತ್ತು ಪತಿ ನಡುವಿನ ವೈವಾಹಿಕ ಬದುಕು ಸರಿಯಿಲ್ಲ, ದರ್ಶನ್‌ ಮತ್ತು ನಾನು ಪ್ರತ್ಯೇಕವಾಗುತ್ತಿದ್ದೇವೆ ಎನ್ನುವ ತಿರುಚಿದ ಸುದ್ದಿ ಪ್ರಕಟಿಸಿವೆ. ಇಂಥ ಹೇಳಿಕೆಗಳು ಕುಟುಂಬಕ್ಕೆ ತೀವ್ರ ಹಾನಿ ಮಾಡಲಿವೆ. ನಮ್ಮ ಪುತ್ರ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾನೆ ಎಂದೂ ಹೇಳಲಾಗಿದೆ.

ಪ್ರತಿವಾದಿ ಮಾಧ್ಯಮಗಳು ನ್ಯಾಯಯುತ ಪತ್ರಿಕಾ ಕಸುಬಿನ ನೆಪದಲ್ಲಿ ನ್ಯಾಯ ಮತ್ತು ಮನರಂಜನೆ ನಡುವಿನ ಗೆರೆಯನ್ನು ಮರೆತಿವೆ. ಮಾಧ್ಯಮ ವಿಚಾರಣೆಯ ಮೂಲಕ ಮುಗ್ಧತೆ ಹಾಗೂ ನ್ಯಾಯಯುತ ಕಾನೂನು ಪ್ರಕ್ರಿಯೆ ಮರೆಮಾಚುವ ಕೆಲಸ ಮಾಡುತ್ತಿವೆ. ನಿವೃತ್ತ ಪೊಲೀಸ್‌ ಅಧಿಕಾರಿಗಳು, ದರ್ಶನ್‌ ಅವರ ಮಾಜಿ ಉದ್ಯೋಗಿಗಳ ಹೇಳಿಕೆಗಳನ್ನು ಪ್ರಸಾರ ಮಾಡುವ ಮೂಲಕ ಕುಟುಂಬದ ಘನತೆಗೆ ಹಾನಿ ಮಾಡುತ್ತಿದ್ದು, ವಿಶೇಷವಾಗಿ ದರ್ಶನ್‌ ಅವರನ್ನು ನಡತೆಗೆಟ್ಟವರು ಎಂದು ಬಿಂಬಿಸುತ್ತಿವೆ ಎಂದು ಆಕ್ಷೇಪಿಸಲಾಗಿದೆ.

ಎರಡು ದಿನಗಳಿಂದ ಮಾಧ್ಯಮಗಳು ದರ್ಶನ್‌ ಮಾತ್ರವಲ್ಲದೇ ಕುಟುಂಬ ಸದಸ್ಯರ ವಿರುದ್ಧ ವೈಯಕ್ತಿಕ ಆರೋಪ ಮಾಡುತ್ತಿದ್ದು, ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನ ದರ್ಶನ್‌ ಅವರ ವರ್ಚಸ್ಸಿಗೆ ಹಾನಿ ಮಾಡುವ ದುರುದ್ದೇಶ ಹೊಂದಲಾಗಿದೆ. ಮಾನಹಾನಿ ಮತ್ತು ಸತ್ಯಕ್ಕೆ ದೂರವಾದ ಹೇಳಿಕೆ/ವಿಡಿಯೊ ಪ್ರಸಾರ ಮಾಡುವ ಮೂಲಕ ಸುದ್ದಿ ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಿವ ಕೆಲಸ ಮಾಡುತ್ತಿವೆ. ದರ್ಶನ್‌ ಅವರ ವರ್ಚಸ್ಸಿಗೆ ಹಾನಿ ಮಾಡುವ ಉದ್ದೇಶದಿಂದ ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪತ್ರಿಕಾ ಕಸುಬಿನ ಕನಿಷ್ಠ ನೈತಿಕತೆ ಮತ್ತು ಘನತೆಯನ್ನೂ ಕಾಯ್ದುಕೊಳ್ಳದೆ ಕುಂದು ಉಂಟುಮಾಡಿವೆ. ದುರುದ್ದೇಶಪೂರಿತ/ಮಾನಹಾನಿ/ಸತ್ಯಕ್ಕೆ ದೂರವಾದ ಹೇಳಿಕೆಗಳು ನ್ಯಾಯಯುತ ತನಿಖೆ/ವಿಚಾರಣೆಗೆ ಗಂಭೀರ ಬೆದರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ತನ್ನ ಹಾಗೂ ಪತಿ ಮತ್ತು ಕುಟುಂಬದ ಘನತೆ ಮತ್ತು ವರ್ಚಸ್ಸಿಗೆ ರಕ್ಷಣೆ ಒದಗಿಸಬೇಕು ಎಂದು ವಿಜಯಲಕ್ಷ್ಮಿ ಕೋರಿದ್ದಾರೆ.

ವಿಜಯಲಕ್ಷ್ಮಿ ಅವರ ಪರವಾಗಿ ವಕೀಲ ಪರಿತೋಷ್‌ ಸಿದ್ದಾಪುರಮಠ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ವಾದಿಸಿದರು.

ಹಿಂದಿನ ಲೇಖನಯುಜಿಸಿ ನೆಟ್‌ ಪರೀಕ್ಷೆ ರದ್ದು: ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರ
ಮುಂದಿನ ಲೇಖನಅಣ್ಣಾಮಲೈ, ತಮಿಳಿಸೈ ವಿರುದ್ಧ ಟೀಕೆ ಮಾಡಿದ್ದಕ್ಕೆ ಬಿಜೆಪಿಯ ಇಬ್ಬರು ನಾಯಕರ ವಜಾ