ಮನೆ ರಾಜ್ಯ ಎಂಸಿಸಿ ಫಲಿತಾಂಶದ ಬಳಿಕ ವೈದ್ಯಕೀಯ ಕೌನ್ಸೆಲಿಂಗ್ – ಕೆಇಎ

ಎಂಸಿಸಿ ಫಲಿತಾಂಶದ ಬಳಿಕ ವೈದ್ಯಕೀಯ ಕೌನ್ಸೆಲಿಂಗ್ – ಕೆಇಎ

0

ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಸೀಟು ಹಂಚಿಕೆಯಾದವರು ಸೆ.3ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ.

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶ ಹೊರಬಿದ್ದ ನಂತರ ಪ್ರಕಟಿಸಲಾಗುವುದು. ಅಲ್ಲಿಯವರೆಗೂ ಈ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾದವರಿಗೆ ಯಾವುದೇ ಛಾಯ್ಸ್ ಆಯ್ಕೆಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದ 2ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಯುಜಿಸಿಇಟಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಹಾಗೂ ಅವರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ನಾಲ್ಕು ಛಾಯ್ಸ್‌ಗಳ ಆಯ್ಕೆಗೂ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳನ್ನು ಹೊರತುಪಡಿಸಿ, ಇತರ ಎಲ್ಲ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಿದ್ದು, ಛಾಯ್ಸ್ ಆಯ್ಕೆಗೂ ಚಾಲನೆ ನೀಡಲಾಗಿದೆ. ಛಾಯ್ಸ್-1 ಮತ್ತು ಛಾಯ್ಸ್-2 ಅನ್ನು ಆಯ್ಕೆ ಮಾಡಿದವರಿಗೆ ಶುಲ್ಕ ಪಾವತಿಸಲು ಸೆ.2ರವರೆಗೆ ಅವಕಾಶ ನೀಡಲಾಗಿದೆ.

ಸೆ.3ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಪ್ರವೇಶ ಪ್ರಕ್ರಿಯೆಗೆ ಹೆಚ್ಚಿನ ಸಮಯ ಇಲ್ಲದ ಕಾರಣ ವೃತ್ತಿಪರ ಕಾಲೇಜುಗಳು ಭಾನುವಾರ ಸೇರಿದಂತೆ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದಾರೆ.