ಮನೆ ಕಾನೂನು ಸುಪ್ರೀಂ ಕೋರ್ಟ್‌ ನಿಂದ ಮಹತ್ವದ ತೀರ್ಪು: ವೈದ್ಯಕೀಯ ಸೇವೆ ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ

ಸುಪ್ರೀಂ ಕೋರ್ಟ್‌ ನಿಂದ ಮಹತ್ವದ ತೀರ್ಪು: ವೈದ್ಯಕೀಯ ಸೇವೆ ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ

0

ನವದೆಹಲಿ (New Delhi)-ವೈದ್ಯರು ಒದಗಿಸುವ ಆರೋಗ್ಯ ಸೇವೆಗಳು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಅಡಿಯ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಗ್ರಾಹಕ ಸಂರಕ್ಷಣಾ ಕಾಯಿದೆ 2019 ಆರೋಗ್ಯ ಸೇವೆಗಳನ್ನು ಒಳಗೊಂಡಿದೆ ಎಂದು ಕೇರಳ ಹೈಕೋರ್ಟ್‌ ಇತ್ತೀಚಿಗೆ ಮಹತ್ವದ ತೀರ್ಪು ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್‌ ಸಹ ಇದೇ ತೀರ್ಪನ್ನು ನೀಡಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ವ್ಯಾಪ್ತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಸೇವೆಗಳನ್ನು ಹೊರಗಿಡಲಾಗಿಲ್ಲ ಎಂಬ ಬಾಂಬೆ ಹೈಕೋರ್ಟ್‌ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮೆಡಿಕೋಸ್‌ ಲೀಗಲ್‌ ಆಕ್ಷನ್‌ ಗ್ರೂಪ್‌ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.

ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ವೈದ್ಯರ ವಿರುದ್ಧ ದೂರುಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಮೆಡಿಕೋಸ್‌ ಲೀಗಲ್‌ ಆಕ್ಷನ್‌ ಗ್ರೂಪ್‌ ಹೈಕೋರ್ಟ್‌ನಲ್ಲಿ ವಾದಿಸಿತ್ತು. ಆದರೆ, ಈ ವಾದವನ್ನು ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್‌ ವಿಭಾಗೀಯ ಪೀಠ ವೈದ್ಯರ ಸೇವೆ ಮತ್ತು ಆರೋಗ್ಯ ಸೇವೆಗಳು ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ಬರುತ್ತದೆ. ವೈದ್ಯರ ಸೇವಾ ನ್ಯೂನ್ಯತೆ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ಸಲ್ಲಿಸಬಹುದು ಎಂದು ಹೇಳಿತ್ತು.

1986 ರ ಕಾಯಿದೆಯನ್ನು 2019ರ ಕಾಯಿದೆಯ ಮೂಲಕ ರದ್ದುಗೊಳಿಸಲಾಗಿದೆ ಹೊರತು ಬೇರೇನೂ ಇಲ್ಲ. ವೈದ್ಯಕೀಯ ವೃತ್ತಿ, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ರೋಗಿಗಳಿಗೆ ನೀಡುವ ‘ಆರೋಗ್ಯ ಆರೈಕೆ ಸೇವೆಗಳನ್ನು ‘ಸೇವೆ’ ಪದದ ವ್ಯಾಖ್ಯಾನದಲ್ಲೇ ಬರುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟ ಶಬ್ದಗಳಲ್ಲಿ ಹೇಳಿರುವುದನ್ನು ಸುಪ್ರೀಂ ಕೋರ್ಟ್‌ ಸಮರ್ಥಿಸಿತು.

ಸಂವಿಧಾನದ 136 ನೇ ವಿಧಿಯ ಅಡಿಯಲ್ಲಿ 5 ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಸ್‌ ಎಲ್‌ ಪಿಯನ್ನು ವಜಾಗೊಳಿಸುವಾಗ ಸುಪ್ರೀಂ ಕೋರ್ಟ್‌ ಹೇಳಿದ್ದು, ಹೈಕೋರ್ಟ್‌ ವಿಧಿಸಿದ 50,000/- ವೆಚ್ಚವನ್ನು ಠೇವಣಿ ಮಾಡಲು ಅರ್ಜಿದಾರರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಸಂಸತ್ತಿನಲ್ಲಿ ಗ್ರಾಹಕ ಸಂರಕ್ಷಣಾ ಮಸೂದೆ 2018 ಅನ್ನು ಮಂಡಿಸುವ ಸಂದರ್ಭದಲ್ಲಿ ‘ಆರೋಗ್ಯ ಕಾರ್‌ʼ ಸೇವೆಗಳು ಕಾಯಿದೆಯ ವ್ಯಾಪ್ತಿ ಬರುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿ ಅರ್ಜಿದಾರರು ವಾದ ಮಂಡಿಸಿದ್ದರು. ಆದರೆ, ಸಚಿವರ ಹೇಳಿಕೆಯು ಶಾಸನದ ವ್ಯಾಪ್ತಿಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಪೀಠ ಸ್ಪಷ್ಟಪಡಿಸಿದೆ.