ಮನೆ ರಾಷ್ಟ್ರೀಯ ಸ್ಪೀಕರ್‌ ಬಿರ್ಲಾ ಕೊಠಡಿಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಜೊತೆ ಸಭೆ..!

ಸ್ಪೀಕರ್‌ ಬಿರ್ಲಾ ಕೊಠಡಿಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಜೊತೆ ಸಭೆ..!

0

ನವದೆಹಲಿ : ಚಳಿಗಾಲದ ಅಧಿವೇಶನ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಸ್ಪೀಕರ್‌ ಓಂ ಬಿರ್ಲಾ ಅವರು ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ ಮತ್ತು ಸಿಪಿಐ ನಾಯಕ ಡಿ ರಾಜಾ ಸೇರಿದಂತೆ ಹಲವು ವಿಪಕ್ಷಗಳ ಸದಸ್ಯರು ಭಾಗಿಯಾಗಿದ್ದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಸ್ಪೀಕರ್‌ ಓಂ ಬಿರ್ಲಾ, 18ನೇ ಲೋಕಸಭೆಯ ಆರನೇ ಅಧಿವೇಶನ ಮುಗಿದ ನಂತರ ಸಂಸತ್ತಿನ ಕಟ್ಟಡದಲ್ಲಿರುವ ಕಚೇರಿಯಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್ಲಾ ಪಕ್ಷಗಳ ಗೌರವಾನ್ವಿತ ನಾಯಕರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಯಿತು ಎಂದು ಬರೆದಿಕೊಂಡಿದ್ದಾರೆ. ಮಾತುಕತೆಯ ವೇಳೆ ಪ್ರಿಯಾಂಕಾ ಗಾಂಧಿಯವರು ಅಲರ್ಜಿಯನ್ನು ತಡೆಗಟ್ಟಲು ತಮ್ಮ ಕ್ಷೇತ್ರವಾದ ವಯನಾಡಿನ ಗಿಡಮೂಲಿಕೆಯನ್ನು ಸೇವಿಸುವುದಾಗಿ ಸಂಸದರೊಂದಿಗೆ ಹಂಚಿಕೊಂಡರು.

ಪ್ರಧಾನಿಯವರ ಇತ್ತೀಚಿನ ಇಥಿಯೋಪಿಯಾ, ಜೋರ್ಡಾನ್ ಮತ್ತು ಓಮನ್ ಪ್ರವಾಸದ ಬಗ್ಗೆಯೂ ಕಾಂಗ್ರೆಸ್ ನಾಯಕರು ವಿಚಾರಿಸಿದರು. ಪ್ರವಾಸ ಚೆನ್ನಾಗಿತ್ತು ಎಂದು ಪ್ರಧಾನಿ ಉತ್ತರಿಸಿದರು. ಮಾತುಕತೆಯ ವೇಳೆ ಅಧಿವೇಶನವನ್ನು ಮತ್ತಷ್ಟು ದಿನ ನಡೆಸಬಹುದಿತ್ತು ಎಂದು ಧರ್ಮೇಂದ್ರ ಯಾದವ್ ಹೇಳಿದರು. ಈ ವೇಳೆ ಮೋದಿ, ನಿಮ್ಮ ಗಂಟಲಿಗೆ ನೋವಾಗಬಾರದು ಎಂಬ ಕಾರಣಕ್ಕೆ ಅಧಿವೇಶದ ಸಮಯವನ್ನು ಕಡಿಮೆ ಮಾಡಲಾಗಿತ್ತು ಎಂದು ತಮಾಷೆಯಾಗಿ ಹೇಳಿದರು.

ಈ ವೇಳೆ ಸದನದಲ್ಲಿ ಯಾದವ್, ಎನ್‌ಕೆ ಪ್ರೇಮಚಂದ್ರನ್ ಸೇರಿದಂತೆ ಕೆಲವು ವಿರೋಧ ಪಕ್ಷದ ಸಂಸದರು ಸದನಕ್ಕೆ ಚೆನ್ನಾಗಿ ಸಿದ್ಧರಾಗಿ ಬಂದು ಚರ್ಚೆಯಲ್ಲಿ ಭಾಗಿಯಾಗಿದ್ದಕ್ಕೆ ಪ್ರಧಾನಿ ಅವರನ್ನು ಶ್ಲಾಘಿಸಿದರು. ಕೆಲವು ವಿರೋಧ ಪಕ್ಷದ ನಾಯಕರು, ಹಳೆಯ ಕಟ್ಟಡದಲ್ಲಿರುವಂತೆಯೇ ಹೊಸ ಸಂಸತ್ ಕಟ್ಟಡದಲ್ಲಿ ಸಂಸದರಿಗಾಗಿ ಕೇಂದ್ರ ಸಭಾಂಗಣವನ್ನು ಸೇರಿಸಬೇಕು. ಅಲ್ಲಿ ಸಂಸದರು ಮತ್ತು ಮಾಜಿ ಸಂಸದರು ಹೆಚ್ಚಾಗಿ ಚರ್ಚೆಗಾಗಿ ಸೇರುತ್ತಾರೆ. ಹೀಗಾಗಿ ಕೇಂದ್ರ ಸಭಾಂಗಣವನ್ನು ಸೇರಿಸಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೆ ಮೋದಿ, ಅದು ನಿವೃತ್ತಿಯಾದ ನಂತರದ ಕೆಲಸ. ನೀವು ಇನ್ನೂ ಸಾಕಷ್ಟು ಸೇವೆ ಸಲ್ಲಿಸಬೇಕಿದೆ ಎಂದು ಹೇಳಿದಾಗ ಸಂಸದರ ಮುಖದಲ್ಲಿ ನಗುವನ್ನು ತರಿಸಿತು ಎಂದು ವರದಿಯಾಗಿದೆ. ಪ್ರತಿ ಅಧಿವೇಶನ ಮುಗಿದ ಬಳಿಕ ಸ್ಪೀಕರ್‌ ತಮ್ಮ ಕೊಠಡಿಯಲ್ಲಿ ಟೀ ಪಾರ್ಟಿ ಆಯೋಜಿಸುತ್ತಾರೆ. ಮಳೆಗಾಲದ ಅಧಿವೇಶನದ ಕೊನೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಇತರ ವಿರೋಧ ಪಕ್ಷದ ನಾಯಕರು ಸ್ಫೀಕರ್‌ ಆಯೋಜಿಸಿದ್ದ ಟೀ ಪಾರ್ಟಿಯನ್ನು ಬಹಿಷ್ಕರಿಸಿದ್ದರು.

ಸ್ಪೀಕರ್ ವಿರೋಧ ಪಕ್ಷದ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಕಾರಣ ನೀಡಿ ಬಹಿಷ್ಕಾರ ಹಾಕಿದ್ದರು. 19 ದಿನಗಳ ಚಳಿಗಾಲದ ಅಧಿವೇಶನ ಔಪಚಾರಿಕವಾಗಿ ಮುಕ್ತಾಯಗೊಂಡಿದ್ದು ಹಲವಾರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಲೋಕಸಭೆ ಶೇ. 111 ರಷ್ಟು ಉತ್ಪಾದಕತೆಯನ್ನು ದಾಖಲಿಸಿದೆ.