ನವದೆಹಲಿ : ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಅಗತ್ಯವಿರುವ ವನ್ಯಜೀವಿ ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿದೆ. ಯೋಜನೆಗೆ 5,200 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಗೆ ಅನುಮೋದನೆ ಕೋರಿ ಕಾವೇರಿ ನೀರಾವರಿ ನಿಗಮವು ಜನವರಿ 4 ರಂದು ಪ್ರಸ್ತಾವ ಸಲ್ಲಿಸಿತ್ತು.
‘ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ವಿಸ್ತೃತ ಯೋಜನಾ ವರದಿಯನ್ನು ರಾಜ್ಯ ಸಲ್ಲಿಸಿಲ್ಲ’ ಎಂದು ಸಚಿವಾಲವು ಜನವರಿ 15 ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರವು ಅಪೂರ್ಣ ದಾಖಲೆಗಳನ್ನು ಸಲ್ಲಿಸಿದೆ ಎಂದೂ ಹೇಳಿತ್ತು.
ಸಮೀಕ್ಷೆ ಕಾರ್ಯಕ್ಕೆ ಈ ದಾಖಲೆಗಳನ್ನ ನೀಡುವ ಅಗತ್ಯ ಇಲ್ಲ ಎಂದು ನೀರಾವರಿ ನಿಗಮವು ಇದೇ 17 ರಂದು ಉತ್ತರ ನೀಡಿದೆ. ಜತೆಗೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆ ಪಡೆಯಲು ಮತ್ತೊಂದು ಪ್ರಸ್ತಾವವನ್ನೂ ಸಲ್ಲಿಸಿದೆ.















