ಮನೆ ಸುದ್ದಿ ಜಾಲ ಮೇಲುಕೋಟೆ: ಮರದ ಕೊಂಬೆ ಬಿದ್ದು, ಮೂವರು ವಿದ್ಯಾರ್ಥಿಗಳು , ಓರ್ವ ಶಿಕ್ಷಕನಿಗೆ ಗಂಭೀರ ಗಾಯ

ಮೇಲುಕೋಟೆ: ಮರದ ಕೊಂಬೆ ಬಿದ್ದು, ಮೂವರು ವಿದ್ಯಾರ್ಥಿಗಳು , ಓರ್ವ ಶಿಕ್ಷಕನಿಗೆ ಗಂಭೀರ ಗಾಯ

0

ಮೇಲುಕೋಟೆ(Melukote): ಇಲ್ಲಿನ ಯೋಗಾನರಸಿಂಹ ಸ್ವಾಮಿ ಬೆಟ್ಟ ಹತ್ತುವ ವೇಳೆ ಭಾನುವಾರ ಒಣಗಿದ ಮರವೊಂದರ ಕೊಂಬೆ ಮರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದಾರೆ.

110 ವಿದ್ಯಾರ್ಥಿಗಳು ಶ್ರೀಕ್ಷೇತ್ರಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದರು. ಚೆಲುವರಾಯಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದು ಬೆಳಿಗ್ಗೆ 11 ಗಂಟೆಯ ವೇಳೆ ಯೋಗಾನರಸಿಂಹಸ್ವಾಮಿ ಬೆಟ್ಟ ಏರುತ್ತಿದ್ದರು. ಮೆಟ್ಟಿಲು ಪಕ್ಕದಲ್ಲೇ ಒಣಗಿದ್ದ ಅರಳಿ ಮರದ ಕೊಂಬೆ ಏಕಾಏಕಿ ವಿದ್ಯಾರ್ಥಿಗಳ ಮೇಲೆ ಮುರಿದು ಬಿದ್ದಿದೆ.

ಘಟನೆಯಲ್ಲಿ ನಂಜನಗೂಡು ಪಟ್ಟಣದ ಲಯನ್ಸ್‌ ಶಾಲೆಯ ವಿದ್ಯಾರ್ಥಿಗಳಾದ ನಿಶಾಂತ್, ವರುಣ್, ಯೋಗೇಶ್ ಹಾಗೂ ಶಿಕ್ಷಕ ಕೇಶವರಾವ್ ಗಂಭೀರ ಗಾಯಗೊಂಡಿದ್ದಾರೆ.

ಒಬ್ಬ ವಿದ್ಯಾರ್ಥಿ ಕಾಲು ಮುರಿದಿದ್ದು ಮತ್ತಿಬ್ಬರಿಗೆ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಾಯಗಳಾಗಿವೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್ ಆಸ್ವತ್ರೆಗೆ ದಾಖಲಿಸಲಾಯಿತು.

ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಇದ್ದರೂ, ಸಿಬ್ಬಂದಿಯಿಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡಬೇಕಾಯಿತು.

ಘಟನೆ ನಡೆದು 1 ಗಂಟೆಯ ಬಳಿಕ ಪಾಂಡವಪುರದಿಂದ ಬಂದ ಆಂಬುಲೆನ್ಸ್‌ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿತು.

ಸ್ಥಳೀಯ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ ಸೇವೆ ದೊರೆಯದೇ ಇರುವುದಕ್ಕೆ ಸ್ಥಳೀಯರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.