ಮನೆ ರಾಜ್ಯ ಅದ್ಧೂರಿಯಾಗಿ ನಡೆದ ಮೇಲುಕೋಟೆ ವೈರಮುಡಿ ಉತ್ಸವ

ಅದ್ಧೂರಿಯಾಗಿ ನಡೆದ ಮೇಲುಕೋಟೆ ವೈರಮುಡಿ ಉತ್ಸವ

0

ಮೇಲುಕೋಟೆ: ಐತಿಹಾಸಿಕ ಹಾಗೂ ಪ್ರಸಿದ್ಧ ವೈರಮುಡಿ ಉತ್ಸವ ಗುರುವಾರ ರಾತ್ರಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಅದ್ಧೂರಿಯಾಗಿ ನಡೆಯಿತು.

ವಜ್ರಖಚಿತ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ‘ಗೋವಿಂದ, ಗೋವಿಂದ’ ಎಂದು ಘೋಷಣೆ ಕೂಗಿದರು. ಗಂಡುಭೇರುಂಡಸ್ವರೂಪಿ ಚಂದ್ರಪ್ರಭೆ ಪ್ರಭಾವಳಿ ಮಧ್ಯದಲ್ಲಿ ಅಲಂಕಾರಸ್ವರೂಪಿಯಾಗಿದ್ದ ಚೆಲುವನಾರಾಯಣಸ್ವಾಮಿ ಉತ್ಸವ ದೇವಾಲಯದ ಹೊರಕ್ಕೆ ಬರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು.

ರಾಮಾನು ಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿದ ನಂತರ ರಾತ್ರಿ 8.ಕ್ಕೆ ವೈರಮುಡಿ ಉತ್ಸವಕ್ಕೆ ಚಾಲನೆ ನಿಡಲಾಯಿತು.

ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ಕಣ್ತುಂಬಿಕೊಂಡು ಭಕ್ತರು ಪುನೀತರಾದರು.ಬೆಳಗ್ಗೆ ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ವೈರಮುಡಿ ಕಿರೀಟವನ್ನು ತೆಗೆದುಕೊಂಡು ಬರಲಾಯಿತು. ಈ ವೇಳೆ ದಾರಿಯುದ್ದಕ್ಕೂ ವೈರಮುಡಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.ಹಳ್ಳಿಗಳಲ್ಲಿ ವೈರಮುಡಿ ಕಿರೀಟಕ್ಕೆ ಭಕ್ತರಿಂದ ಸ್ವಾಗತ, ವೆಂಕಟರಮಣ ಗೋವಿಂದಾ ಘೋಷಣೆ ಕೂಗಲಾಯ್ತು.

ದಾರಿಯುದ್ದಕ್ಕೂ ಹಳ್ಳಿಗಳಲ್ಲಿ ಪೂಜೆ, ಸ್ವಾಗತ!

ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ಶ್ರೀ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ವಜ್ರಖಚಿತ ವೈರಮುಡಿ, ರಾಜಮುಡಿ ಮತ್ತು ಇತರ ವಜ್ರಾಭರಣಗಳನ್ನು ನಗರದಿಂದ ಗುರವಾರ ಬೆಳಗ್ಗೆ ಮೇಲುಕೋಟೆಗೆ ಕೊಂಡೊಯ್ಯಲಾಯಿತು. ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಸ್ವಾಗತ ಕೋರಲಾಯಿತು. ಜಿಲ್ಲಾಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ಎರಡು ಗಂಟುಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ,ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ನೇತೃತ್ವದಲ್ಲಿ ಬೆಳಗ್ಗೆ 7.30ಕ್ಕೆ ಹೊರಗೆ ತೆಗೆಯಲಾಯಿತು. ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು, ಅವುಗಳಿಗೆ ಹಾರ ತೊಡಿಸಿ, ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ನೆರವೇರಿಸಲಾಯಿತು.

ಈ ವೇಳೆ ಅದಿಕಾರಿಗಳು ವೈರಮುಡಿ ಮತ್ತು ವಜ್ರಾಭರಣಗಳಿದ್ದ ಗಂಟುಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಿಂದಿನ ವರ್ಷಗಳಲ್ಲಿ ಖಜಾನೆ ಆವರಣದಲ್ಲೇ ಭಕ್ತರು ಸರತಿ ಸಾಲಿನಲ್ಲಿಆಗಮಿಸಿ ಆಭರಣಗಳ ಗಂಟುಗಳನ್ನು ಮುಟ್ಟಿ, ನಮಸ್ಕರಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ಐದು ವರ್ಷದಿಂದ ಆ ಪದ್ಧತಿಗೆ ತಿಲಾಂಜಲಿ ಹೇಳಲಾಗಿತ್ತು. ಅದು ಈ ವರ್ಷವೂ ಮುಂದುವರೆಯಿತು. ಪೂಜೆ ಬಳಿಕ ಆಭರಣಗಳ ಗಂಟುಗಳನ್ನು ವಾಹನದಲ್ಲಿರಿಸಲಾಯಿತು.

ವೈರಮುಡಿ ಉತ್ಸವದ ಅಂಗವಾಗಿ ವರ್ಷಕ್ಕೊಮ್ಮೆ ಮಾತ್ರ ವೈರಮುಡಿ ಕಿರೀಟವನ್ನು ಖಜಾನೆಯಿಂದ ಹೊರ ತೆಗೆಯಲಾಗುತ್ತದೆ.ಮೈಸೂರಿನ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ವಾಹನದಲ್ಲಿ ವೈರಮುಡಿ, ರಾಜಮುಡಿ ಮತ್ತು ವಜ್ರಾಭರಣಗಳನ್ನು ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆ ಮೇಲುಕೋಟೆಗೆ ಕೊಂಡೊಯ್ಯುವುದು ಸಂಪ್ರದಾಯ. ಅದರಂತೆ ಈ ವರ್ಷವೂ ಅದೇ ವಾಹನದಲ್ಲಿ ಪ್ರಯಾಣ ಬೆಳೆಸಲಾಯಿತು.

ಮೇಲುಕೋಟೆಗೆ ತೆರಳುವ ಮಾರ್ಗಮಧ್ಯೆ ಸಿಗುವ ಇಂಡುವಾಳು, ಸುಂಡಹಳ್ಳಿ, ತೂಬಿನಕೆರೆ, ಕಾಳೇನಹಳ್ಳಿ, ಗಣಂಗೂರು, ಬಾಬುರಾಯನಕೊಪ್ಪಲು, ಕಿರಂಗೂರು, ದರಸಗುಪ್ಪೆ, ಪಾಂಡವಪುರ, ಕೆ.ಬೆಟ್ಟಹಳ್ಳಿ, ಮಾಣಿಕ್ಯನಹಳ್ಳಿ, ಜಕ್ಕನಹಳ್ಳಿ ಸೇರಿದಂತೆ 86 ಹಳ್ಳಿಗಳ ಮಾರ್ಗವಾಗಿ ವೈರಮುಡಿ ಹೊತ್ತ ವಾಹನ ಮೇಲುಕೋಟೆಗೆ ಸಂಜೆ ವೇಳೆಗೆ ತಲುಪಿತು. ಮಾರ್ಗದುದ್ದಕ್ಕೂ ಹಳ್ಳಿಗಳಲ್ಲಿ ರಸ್ತೆಗಳಲ್ಲಿ ರಂಗೋಲಿ ಇಟ್ಟು, ತಳಿರು, ತೋರಣ, ಚಪ್ಪರ ಹಾಕಿಕೊಂಡು ಕಾಯುತ್ತಿದ್ದ ಭಕ್ತರು ವೈರಮುಡಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಅಲ್ಲಲ್ಲಿ ಪಾನಕ, ನೀರು ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗವೂ ನಡೆಯಿತು.

ಹಿಂದಿನ ಲೇಖನಸುರಕ್ಷಿತ ಆಹಾರ ಗ್ರಾಹಕನ ಹಕ್ಕು: ಕಲಬೆರಕೆ ಆಹಾರ ನಿಷೇಧಕ್ಕೆ ಮುಂದಾಗಲು ವಿದ್ಯಾರ್ಥಿಗಳಿಗೆ ಕರೆ- ಹಿರಿಯ ವಿಜ್ಞಾನಿ ಡಾ. ಜಿ. ಪಾಂಡುರಂಗ ಮೂರ್ತಿ
ಮುಂದಿನ ಲೇಖನಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಸಾಬೀತು: ಮೂವರಿಗೆ ಕಠಿಣ ಶಿಕ್ಷೆ