ವೈವಾಹಿಕ ವಿವಾದಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಸಂತ್ರಸ್ತರಾಗಿದ್ದು, ಪುರುಷರೂ ಸಹ ಅಂಥ ಪ್ರಕರಣಗಳಿಂದ ಹಾನಿಗೊಳಗಾಗುತ್ತಾರೆ. ಲಿಂಗ ತಾರತಮ್ಯವಿಲ್ಲದ ಸಮಾಜ ಸದ್ಯದ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ತನ್ನ ಮನೆಯಿಂದ ನ್ಯಾಯಾಲಯವು 130 ಕಿ ಮೀ ದೂರದಲ್ಲಿದೆ. ವಿಚಾರಣೆಗೆ ಹೋಗಿಬರಲು ಕಷ್ಟವಾಗುತ್ತದೆ. ಹೀಗಾಗಿ, ಪ್ರಕರಣ ವರ್ಗಾವಣೆ ಮಾಡಬೇಕು ಎಂದು ವಿಚ್ಛೇದನ ಪ್ರಕರಣವೊಂದರ ಸಂಬಂಧ ಮಹಿಳೆಯೊಬ್ಬರು ಸಲ್ಲಿಸಿದ್ದ ವರ್ಗಾವಣೆ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಚಿಲ್ಲಾಕುರ್ ಸುಮಲತಾ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.
ಮಹಿಳೆಗೆ ಇಷ್ಟು ಸಮಸ್ಯೆಯಾಗುವುದಾದರೆ ಪ್ರಕರಣದಲ್ಲಿ ಪ್ರತಿವಾದಿಯಾದ ಹಾಗೂ ಇಬ್ಬರು ಅಪ್ರಾಪ್ತ ಪುತ್ರಿಯರ ಪಾಲನೆಯ ಹೊಣೆ ಹೊತ್ತಿರುವ ಆಕೆಯ ಪರಿತ್ಯಕ್ತ ಪತಿಗೆ ಇದರಿಂದ ಇನ್ನೂ ಹೆಚ್ಚಿನ ತೊಂದರೆಯಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ಸಾಂವಿಧಾನಿಕವಾಗಿ ಪುರುಷರಷ್ಟೇ ಸಮಾನ ಹಕ್ಕುಗಳು ಮಹಿಳೆಯರಿಗೆ ಇವೆ. ವಾಸ್ತವಿಕ ವಿಚಾರವೇನೆಂದರೆ ಇಂಥ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ಹೆಚ್ಚು ಬಾಧಿತರಾಗಿರುತ್ತಾರೆ. ಅದರ ಅರ್ಥ ಮಹಿಳೆಯರಿಂದ ಪುರಷರ ಮೇಲೆ ಕ್ರೌರ್ಯವಾಗುವುದಿಲ್ಲ ಎಂದಲ್ಲ. ಹೀಗಾಗಿ, ಲಿಂಗ ತಾರತಮ್ಯವಿಲ್ಲದ ಸಮಾಜ ಸದ್ಯದ ತುರ್ತಾಗಿದೆ. ಇಂಥ ಸಮಾಜವು ಲಿಂಗಾಧರಿತ ಕರ್ತವ್ಯಗಳನ್ನು ಪ್ರತ್ಯೇಕಗೊಳಿಸುವುದನ್ನು ನಿಷೇಧಿಸುವ ಗುರಿ ಹೊಂದಿರುತ್ತದೆ” ಎಂದು ಪೀಠ ಹೇಳಿದೆ.
ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ವಿಚ್ಛೇದನ ನ್ಯಾಯಾಂಗ ಪ್ರಕ್ರಿಯೆಯನ್ನು ಶಿವಮೊಗ್ಗ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಕೋರಿ ಮಹಿಳೆಯು ಅರ್ಜಿ ಸಲ್ಲಿಸಿದ್ದರು.
ಪತಿಯ ಪರ ವಕೀಲ “ವೈವಾಹಿಕ ಸಂಬಂಧದಿಂದ ಜನಿಸಿರುವ ಏಳು ಮತ್ತು ಒಂಭತ್ತು ವರ್ಷದ ಎರಡು ಮಕ್ಕಳನ್ನು ಪತಿ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಊಟ ತಯಾರಿಸಿ ಉಣಬಡಿಸುವುದು, ಶಾಲೆಗೆ ಕಳುಹಿಸುವುದು ಸೇರಿ ಇತ್ಯಾದಿ ಕೆಲಸಗಳನ್ನು ಪತಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗಕ್ಕೆ ವರ್ಗಾಯಿಸಿದರೆ ಅಲ್ಲಿಗೆ ತೆರಳಲು ಅವರು ಸಾಕಷ್ಟು ಓಡಾಟ ಮಾಡಬೇಕಾಗುತ್ತದೆ. ಇದು ಸಾಕಷ್ಟು ಸಮಸ್ಯೆ ಉಂಟು ಮಾಡಲಿದೆ” ಎಂದರು.
ಇದನ್ನು ಒಪ್ಪಿದ ಪೀಠವು ಮಹಿಳೆ ಪ್ರಕರಣ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ವಾಸ್ತವಿಕ ವಿಚಾರಗಳನ್ನು ಪರಿಶೀಲಿಸದೆ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೇಳಿತು.
ಪತ್ನಿಯ ಪರವಾಗಿ ವಕೀಲ ಬಿ ಎಸ್ ಮುರಳಿ ಮತ್ತು ಪತಿಯ ಪರವಾಗಿ ವಕೀಲ ಕೆ ನಾಗಲಿಂಗಪ್ಪ ವಾದಿಸಿದ್ದರು.