ಮನೆ ರಾಜ್ಯ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ,...

ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ, ಬಿಎಂಆರ್’ಸಿಎಲ್’ನಿಂದ 20 ಲಕ್ಷ ರೂ. ಪರಿಹಾರ

0

ಬೆಂಗಳೂರು(Bengaluru): ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದುಬಿದ್ದ ಪರಿಣಾಮ ಸಾವನ್ನಪ್ಪಿದ ತಾಯಿ ಹಾಗೂ ಎರಡು ವರ್ಷದ ಮಗುವಿನ ಕುಟುಂಬಸ್ಥರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಬಿಎಂಆರ್ ಸಿಎಲ್ ನಿಂದ  20 ಲಕ್ಷ ರೂ. ಪರಿಹಾರವನ್ನು  ಘೋಷಿಸಲಾಗಿದೆ.

ಎಚ್’ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್’ಗೆ ನಿಲ್ಲಿಸಿದಂತಹ ಕಬ್ಬಿಣದ ರಾಡ್’ಗಳು ಬೈಕ್’ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮಗುವಿನ ಮೇಲೆ ಬಿದಿದ್ದವು. ಇದರಿಂದಾಗಿ  ಗಂಭೀರವಾಗಿ ಗಾಯಗೊಂಡಿದ್ದ  ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿಯಾಗದೆ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಂದೆ ಹಾಗೂ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್, ಇದೊಂದು ದುರಾದೃಷ್ಟಕರ ಘಟನೆಯಾಗಿದ್ದು, ಮೃತರ ಕುಟುಂಬಸ್ಥರಿಗೆ 20 ಲಕ್ಷ ಪರಿಹಾರ ಒದಗಿಸಲಾಗುವುದು ಎಂದರು.

ಮೆಟ್ರೋ ನಿರ್ಮಾಣದಲ್ಲಿ ಸಾಧ್ಯವಾದಷ್ಟು ಅತ್ಯಂತ ಹೆಚ್ಚಿನ ಗುಣಮಟ್ಟವನ್ನು ಅನುಸರಿಸುತ್ತಿದ್ದೇವೆ. ಘಟನೆ ಸಂಬಂಧ ವಿಸ್ತೃತವಾಗಿ ತನಿಖೆ ನಡೆಸಲಾಗುವುದು, ಒಂದು ವೇಳೆ ತಾಂತ್ರಿಕ ದೋಷ ಅಥವಾ ಕಾರ್ಮಿಕರ ತಪ್ಪಿನಿಂದಾದ ಅವಘಡ ಎಂದು ಕಂಡುಬಂದಲ್ಲಿ ಮುಂದೆ ಇಂತಹ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಹಾಗೂ ಘಟನೆ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.