ಸಮ್ಮತಿಯಿಲ್ಲದ ಖಾಸಗಿ ಚಿತ್ರಗಳನ್ನು (NCII) ಅವುಗಳ ಯುಆರ್‌ಎಲ್‌ಗಳಿಗೆ ಒತ್ತಾಯಿಸದೆ ಅಂತರ್ಜಾಲದಿಂದ ಮೊದಲೇ ತೆಗೆದುಹಾಕುವಂತೆ ಸರ್ಚ್ ಎಂಜಿನ್‌ಗಳಿಗೆ ನೀಡಿದ್ದ ಆದೇಶ ಪ್ರಶ್ನಿಸಿ ಟೆಕ್ ದೈತ್ಯರಾದ ಮೈಕ್ರೋಸಾಫ್ಟ್ ಮತ್ತು ಗೂಗಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿವೆ.
ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ನಿರ್ದೇಶನಗಳನ್ನು ಕಾರ್ಯಗತಗೊಳಿಸುವುದು ತಾಂತ್ರಿಕವಾಗಿ ಅಸಾಧ್ಯವಾಗಿದ್ದು ನಿರ್ದೇಶನಗಳು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟನ್ನು ಮೀರಿವೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠಕ್ಕೆ ಮೈಕ್ರೋಸಾಫ್ಟ್ ತಿಳಿಸಿತು.
ಇದೇ ರೀತಿಯ ಅರ್ಜಿಯನ್ನು ಗೂಗಲ್ ಗುರುವಾರ (ಮೇ 9) ಸಲ್ಲಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದಾಗ ನಾಳೆ ಎರಡೂ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.
ಐಟಿ ನಿಯಮಾವಳಿ ಪಾಲಿಸದಿದ್ದರೆ ಹಾಗೂ ಅಂತಹ ಚಿತ್ರಗಳನ್ನು ತೆಗೆದುಹಾಕದಿದ್ದರೆ ತಮಗೆ ಇರುವ ರಕ್ಷಣೆಯನ್ನು ಸರ್ಚ್ ಎಂಜಿನ್‌ಗಳು ಕಳೆದುಕೊಳ್ಳುತ್ತವೆ ಎಂದು ಏಪ್ರಿಲ್ 2023ರಲ್ಲಿ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಎಚ್ಚರಿಸಿತ್ತು.
ಇಂತಹ ಚಿತ್ರಗಳನ್ನು ತೆಗೆದುಹಾಕಲು ಸಂತ್ರಸ್ತರು ಮತ್ತೆ ಮತ್ತೆ ನ್ಯಾಯಾಲಯ ಇಲ್ಲವೇ ಅಧಿಕಾರಿಗಳನ್ನು ಸಂಪರ್ಕಿಸುವ ಅಗತ್ಯವಿಲ್ಲದೆ ಸರ್ಚ್ ಇಂಜಿನ್‌ಗಳೇ ಅದನ್ನು ತೆಗೆದುಹಾಕುವ ತಂತ್ರಜ್ಞಾನವಿದೆ ಎಂದು ನ್ಯಾ. ಪ್ರಸಾದ್ ಅಭಿಪ್ರಾಯಪಟ್ಟಿದ್ದರು.
ಅಂತಹ ಕಾನೂನುಬಾಹಿರ ವಸ್ತುವಿಷಯ ಹೊಂದಿರುವ ಲಿಂಕ್‌ಗಳನ್ನು ತೆಗೆದುಹಾಕಲು ಅಥವಾ ಬಳಕೆ ನಿಷ್ಕ್ರಿಯಗೊಳಿಸಲು ಸರ್ಚ್ ಇಂಜಿನ್‌ಗಳು ಅಸಹಾಯಕತೆ ವ್ಯಕ್ತಪಡಿಸುವಂತಿಲ್ಲ ಎಂದು ಏಕಸದಸ್ಯ ಪೀಠ ಎಚ್ಚರಿಸಿತ್ತು.
ಇಂದು ಮೈಕ್ರೋಸಾಫ್ಟ್ ಪರವಾಗಿ ಹಾಜರಾದ ಹಿರಿಯ ವಕೀಲ ಜಯಂತ್ ಮೆಹ್ತಾ, ಏಕಸದಸ್ಯ ಪೀಠ ಮೆಟಾ (ಫೇಸ್‌ಬುಕ್) ಬಳಸುವ ಸಾಧನವನ್ನು ಅವಲಂಬಿಸಿ ಈ ರೀತಿ ಹೇಳಿತ್ತು. ಆದರೆ ಮೆಟಾ ಮತ್ತು ಮೈಕ್ರೋಸಾಫ್ಟ್ ಸರ್ಚ್ ಎಂಜಿನ್ ಬಿಂಗ್ ನಡುವೆ ಸಾಕಷ್ಟು ವ್ಯತ್ಯಾಸವಿದ್ದು ಮೆಟಾದಂತೆ, ಬಿಂಗ್ ಯಾವುದೇ ವಿಷಯವನ್ನು ಹೋಸ್ಟ್ ಮಾಡುವುದಿಲ್ಲ ಎಂದರು. ಡೇಟಾಬೇಸ್‌ನಾದ್ಯಂತ ಇರುವ ಚಿತ್ರಗಳನ್ನು ಹುಡುಕಿ ತೆಗೆದುಹಾಕಲು ತಿಳಿಸಿದರೆ ಅದು ಸಾಧ್ಯವಾಗದು ಎಂದು ತಿಳಿಸಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಪರಿಕರಗಳಿಗೆ ಸಮ್ಮತಿಯ ಮತ್ತು ಸಮ್ಮತಿ ಇಲ್ಲದ ಚಿತ್ರಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಅವು ಕೂಡ ಇಂತಹ ನಿರ್ದೇಶನ ಪಾಲಿಸಬೇಕು ಎಂದು ಸೂಚಿಸಲು ಸಾಧ್ಯವಾಗದು ಎಂದು ಅವರು ಪ್ರತಿಪಾದಿಸಿದರು.