ಮನೆ ರಾಜಕೀಯ ಮಧ್ಯರಾತ್ರಿ ಆಯವ್ಯಯ ಮಂಡನೆ ಮಾಡಿದ ಬಿಬಿಎಂಪಿ

ಮಧ್ಯರಾತ್ರಿ ಆಯವ್ಯಯ ಮಂಡನೆ ಮಾಡಿದ ಬಿಬಿಎಂಪಿ

0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಾವುದೇ ಮಾಹಿತಿ ನೀಡದೆ ತುರ್ತಾಗಿ ಇದೇ ಮೊದಲ ಬಾರಿಗೆ ತಡರಾತ್ರಿ 11:24ಕ್ಕೆ ಆಯವ್ಯಯ ಮಂಡನೆ ಮಾಡಿದ್ದು, 2022-23ನೇ ಸಾಲಿನ ಬಿಬಿಎಂಪಿ ಆಯವ್ಯಯವನ್ನು ಬಿಬಿಎಂಪಿ ವೆಬ್‌ಸೈಟ್​​ನ ಮುಖಪುಟದಲ್ಲಿ ಅಪ್ಲೋಡ್​ ಮಾಡಲಾಗಿದೆ.

ಹಣಕಾಸು ವಿಶೇಷ ಆಯುಕ್ತೆ  ತುಳಸಿ ಮದ್ದಿನೇನಿ ಈ ಕುರಿತು ಮಾಹಿತಿ ನೀಡಿದ್ದು, 10,480.92 ಕೋಟಿ ರೂ ಮೊತ್ತದ ಬಜೆಟ್ ಇದಾಗಿದೆ. ಒಟ್ಟಾರೆ ಶೇಕಡಾ 76ರಷ್ಟು ಅನುದಾನವನ್ನು ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ 370 ಕೋಟಿ ಮೀಸಲು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 346 ಕೋಟಿ ಮೀಸಲು ಹಾಗೂ ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ಮೀಸಲು, ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ ಮೀಸಲಿಟ್ಟಿದ್ದು, ಆರೋಗ್ಯ ವಲಯಕ್ಕೆ 75 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಮಧ್ಯರಾತ್ರಿಯಲ್ಲಿ ಬಜೆಟ್ ಮಾಹಿತಿ ಕೊಟ್ಟ ಪಾಲಿಕೆಯು ಬಜೆಟ್ ಮಂಡನೆ ವಿಚಾರದಲ್ಲಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಸೋತಿದೆ. ತರಾತುರಿಯಲ್ಲಿ ಹಲವು ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಮಂಡನೆ ಮಾಡಿದೆ.‌

ಗುರುವಾರ ಪಾಲಿಕೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು, ತದನಂತರ ಬಜೆಟ್ ಮಂಡನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಜನಪ್ರತಿನಿಧಿಗಳು ಇಲ್ಲದೇ‌ ಹೋದಾಗ ಅಧಿಕಾರಿಗಳು ರಾತ್ರಿ ವೇಳೆ ಬಜೆಟ್ ಮಂಡಿಸಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಮಾರ್ಚ್ 30ರಂದು ಬಜೆಟ್ ಮಂಡನೆ ಪ್ಲಾನ್ ನಡೆದಿತ್ತು. ಆದರೆ, ಚುನಾವಣಾ ಬಜೆಟ್ ಎಂಬ ಕಾರಣಕ್ಕೆ ಜ‌ನಪ್ರತಿನಿಧಿಗಳ ಅಭಿಪ್ರಾಯ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.