ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಸುರಂಗ ನಿರ್ಮಾಣದ ಸ್ಥಳದಲ್ಲಿ ಭಾನುವಾರ ಸಂಜೆ ಉಗ್ರರು ದಾಳಿ ನಡೆಸಿದ್ದು, ವೈದ್ಯರು ಸೇರಿದಂತೆ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ಉಳಿದ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಉಗ್ರರ ದಾಳಿಗೆ ಬುದ್ಗಾಮ್ ಜಿಲ್ಲೆಯ ಡಾಕ್ಟರ್ ಶಹನವಾಜ್ ಮತ್ತು ಇತರ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್ ಹಾಗೇ ಜಮ್ಮುವಿನ ಶಶಿ ಅಬ್ರೋಲ್, ಮಧ್ಯಪ್ರದೇಶದ ಅನಿಲ್ ಶುಕ್ಲಾ, ಪಂಜಾಬ್‌ನ ಗುರ್ಮೀತ್ ಸಿಂಗ್ ಮೃತ ಕಾರ್ಮಿಕರು.
“ಉಗ್ರರು ಸಂಜೆ ವೇಳೆ ಶಿಬಿರದೊಳಗೆ ದಾಳಿ ನಡೆಸಿದಾಗ ಕಾರ್ಮಿಕರು ಸುರಂಗದಿಂದ ಶಿಬಿರದ ಸ್ಥಳಕ್ಕೆ ಮರಳಿದ್ದಾರೆ. ದಾಳಿಕೋರರು ಕಾರ್ಮಿಕರ ಕಡೆಗೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ವೈದ್ಯರು ಸೇರಿದಂತೆ ಐವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ” ಎಂದು ಅಧಿಕೃತ ಮೂಲಗಳು ತಿಳಿಸಿವೆ.