ನಮ್ಮ ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ಶಕ್ತಿ ಹಾಗು ಮಹಿಮೆಯನ್ನು ಹೊಂದಿದೆ. ಆ ಸಾಲಿನಲ್ಲಿ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿರುವ ನಿಮಿಷಾಂಬ ದೇವಿಯ ದೇವಾಲಯವು ಒಂದು. ನಿಮಿಷ ಎಂದರೆ ಒಂದು ಕ್ಷಣ. ಅಂದರೆ ಇಲ್ಲಿನ ದೇವಿಯು ಭಕ್ತರ ಕಷ್ಟಗಳನ್ನು ನಿಮಿಷದಲ್ಲಿ ಪರಿಹಾರ ನೀಡುವ ತಾಯಿ ಎಂದೇ ಪ್ರಸಿದ್ಧಿ ಹೊಂದಿದ್ದಾಳೆ. ಈಕೆಯು ಪಾರ್ವತಿಯ ಸ್ವರೂಪವೇ ಆಗಿದ್ದಾಳೆ. ಈ ಮಹಿಮೆಯುಳ್ಳ ದೇವಾಲಯವು ಕಾವೇರಿ ನದಿ ದಂಡೆಯ ಮೇಲಿದೆ. ಈಕೆಯನ್ನು ದರ್ಶನ ಮಾಡುವ ಸಲುವಾಗಿ ಅನೇಕ ರಾಜ್ಯಗಳಿಂದ ಭೇಟಿ ನೀಡುತ್ತಿರುತ್ತಾರೆ.
ಪವಿತ್ರವಾದ ಕಾವೇರಿ ನದಿಯ ಮೇಲೆ ನೆಲೆಸಿರುವ ಈ ತಾಯಿಯ ದೇವಾಲಯವು ಶ್ರೀರಂಗಪಟ್ಟಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇದೊಂದು ಸುಪ್ರಸಿದ್ಧ ದೇವಾಲಯ ಕೂಡ ಆಗಿದೆ. ಶ್ರೀ ನಿಮಿಷಾಂಬಳನ್ನು ಶಿವನ ಪತ್ನಿಯಾದ ಪಾರ್ವತಿಯ ಅವತಾರವೆಂದೇ ಪರಿಗಣಿಸಲಾಗಿದೆ. ಈ ಸ್ಥಳವು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ.
ಈ ನಿಮಿಷಾಂಬ ತಾಯಿಯು ಭಕ್ತರ ಕಷ್ಟಗಳನ್ನು ನಿಮಿಷದಲ್ಲಿ ಪರಿಹಾರ ಮಾಡುತ್ತಾಳೆ ಎಂದೇ ನಂಬಲಾಗಿದೆ. ಹಾಗಾಗಿಯೇ ಈ ತಾಯಿಯನ್ನು ನಿಮಿಷಾಂಬ ಎಂಬ ಹೆಸರಿನಿಂದ ಕರೆಯುತ್ತಾರೆ. ಸುಮಾರು 400 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಈ ಮಹಿಮಾನ್ವಿತವಾದ ದೇವಾಲಯವನ್ನು ನಿರ್ಮಾಣ ಮಾಡಲಾಯಿತು.
ಈ ದೇವಾಲಯವು ನೋಡುವುದಕ್ಕೆ ಅತ್ಯಂತ ಸುಂದರವಾಗಿದೆ. ಚಿಕ್ಕದಾಗಿದ್ದರು ಕೂಡ ಮಹಿಮೆ ಮಾತ್ರ ಆಗಾಧವಾದುದು. ಪ್ರವೇಶದ ಗೋಪುರವು 7 ಅಂತಸ್ತುಗಳಷ್ಟು ಭವ್ಯವಾಗಿದೆ. ಈ ಗೋಪುರವು ಭಕ್ತರಲ್ಲಿ ಆಧ್ಯಾತ್ಮಿಕ ಭಾವವನ್ನು ಉಂಟು ಮಾಡುತ್ತದೆ.
ನಿಮಿಷದಲ್ಲಿ ಇಷ್ಟಾರ್ಥಗಳನ್ನು ಪೂರೈಸುವ ನಿಮಿಷಾಂಬ ದೇವಿ ಇವಳು… ಈ ದೇವಾಲಯವು ಟಿಪ್ಪುವಿನ ಬೇಸಿಗೆ ಅರಮನೆಗೆ ಹೋಗುವ ದಾರಿಯ ಪೂರ್ವ ದಿಕ್ಕಿನಲ್ಲಿರುವ ಶ್ರೀರಂಗಪಟ್ಟಣದ ಬಸ್ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ದೇವಿಯ ಮುಂಭಾಗದಲ್ಲಿ ಶ್ರೀ ಚಕ್ರವನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಇದು ಭಕ್ತರಿಗೆ ಆಕರ್ಷಿಸುತ್ತದೆ.
ಈ ದೇವಿಯ ದರ್ಶನ ಭಾಗ್ಯ ಪಡೆಯಲು ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಮುಖ್ಯವಾಗಿ ಅವಿವಾಹಿತರು, ಸಂತಾನ ಇಲ್ಲದೇ ಇರುವವರು, ಕಷ್ಟ, ಶಾಂತಿ ಇಲ್ಲದೇ ಇರುವವರು, ಉದ್ಯೋಗ ಇನ್ನು ಹಲವಾರು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಈ ತಾಯಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ.
ಈ ತಾಯಿಯನ್ನು ಭಕ್ತಿಯಿಂದ ಆರಾಧಿಸಿದರೆ ನಿಮಿಷದಲ್ಲಿ ಸಕಲ ಕಷ್ಟಗಳು ದೂರವಾಗುತ್ತದೆ ಎಂತೆ. ಈ ದೇವಿಯ ದೇವಾಲಯದಲ್ಲಿ ನೀಡುವ ಲಿಂಬೆ ಹಣ್ಣನ್ನು ಮನೆಯಲ್ಲಿ ಕೆಲವು ದಿನಗಳ ಕಾಲ ಇಟ್ಟುಕೊಂಡು ಬಾವಿಯಲ್ಲಿಯೋ, ನದಿಯಲ್ಲಿಯೋ, ವಿಸರ್ಜಿಸಿದರೆ ಜೀವನದಲ್ಲಿ ಒದಗಬಹುದಾದ ಕಷ್ಟಗಳೆಲ್ಲಾ ದೂರವಾಗುತ್ತದೆ ಎಂತೆ.
ನಿಮಿಷಾಂಬ ದೇವಾಲಯದ ಜೊತೆ ಜೊತೆಗೆ ಮುಕ್ತೇಶ್ವರ ದೇವಾಲಯ, ಗಣೇಶನ ದೇವಾಲಯ, ಲಕ್ಷ್ಮೀನಾರಾಯಣನ ದೇವಾಲಯ ಮತ್ತು ಹನುಮಂತನ ದೇವಾಲಯಗಳು ಕೂಡ ಇಲ್ಲಿವೆ. ಈ ದೇವಾಲಯದಲ್ಲಿ ಪ್ರತಿ ಶುಕ್ರವಾರದಂದು ವಿಜೃಂಬಣೆಯಿಂದ ಪೂಜೆಗಳು ನಡೆಯುತ್ತವೆ.
ವರಮಹಾಲಕ್ಷ್ಮೀ ಹಬ್ಬದ ದಿನದಂದು ಹಾಗು ನವರಾತ್ರಿಯಂದು ರಾಜ್ಯದ ಮೂಲೆ ಮೂಲೆಗಳಿಂದ ಈ ತಾಯಿಯನ್ನು ಆರಾಧಿಸಲು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯದ ಪ್ರವೇಶ ಸಮಯವು ಬೆಳಗ್ಗೆ 6:30 ರಿಂದ ರಾತ್ರಿ 8:30ರವರೆಗೆ.
ಈ ಮಹಿಮೆಯುಳ್ಳ ದೇವಾಲಯಕ್ಕೆ ಶ್ರೀರಂಗಪಟ್ಟಣದಿಂದ ಸುಮಾರು 2 ಕಿ.ಮೀ, ಮೈಸೂರಿನಿಂದ 17 ಕಿ.ಮೀ ಹಾಗು ಬೆಂಗಳೂರಿನಿಂದ 125 ಕಿ.ಮೀಗಳಷ್ಟು ದೂರದಲ್ಲಿದೆ. ಮೈಸೂರಿನಿಂದ ಹಾಗು ಬೆಂಗಳೂರಿನಿಂದ ಸುಲಭವಾಗಿ ಬಸ್ಸುಗಳ ಮೂಲಕ ತಲುಪಬಹುದು.
ಶ್ರೀರಂಗ ಪಟ್ಟಣದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಒಮ್ಮೆ ಈ ತಾಣಗಳಿಗೆಲ್ಲಾ ಭೇಟಿ ನೀಡಿ ಬನ್ನಿ. ಶ್ರೀರಂಗನಾಥ ಸ್ವಾಮಿ ದೇವಾಲಯ, ದರಿಯಾ ದೌಲತಾ ಬಾದ್ ಪ್ಯಾಲೆಸ್, ಬಾಲಾಮುರಿ ಫಾಲ್ಸ್, ನಿಮಿಷಾಂಭ ದೇವಾಲಯ, ರಂಗನತಿಟ್ಟು ಪಕ್ಷಿಧಾಮ ಇನ್ನು ಹಲವಾರು.