ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್ ಸುರೇಶ (ಬೈರತಿ) ಜನತೆಗೆ ಕರೆ ನೀಡಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಬೈರತಿ ಸುರೇಶ ಅವರು ಇಂದು ಆರ್.ಟಿ ನಗರದ ಹೆಚ್.ಎಂ.ಟಿ ಮೈದಾನದಲ್ಲಿ ಎರ್ಪಡಿಸಿದ್ದ ಜನಸ್ಪಂದನ ಕಾರ್ಯಕಮ್ರವನ್ನು ಉದ್ಘಾಟಿಸಿ ಮಾತನಾಡಿದರು.
2023 ರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅನುಷ್ಟಾನಕ್ಕೆ ತರಲಾಗಿದೆ. ಇದಕ್ಕಾಗಿ 49 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ವ್ಯಯಿಸಲಾಗಿದೆ. 2024-25 ಬಜೆಟ್ನಲ್ಲಿ 52 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಈ 5 ಗ್ಯಾರಂಟಿಗಳನ್ನು ಹೆಬ್ಬಾಳ ಕ್ಷೇತ್ರದ ಜನತೆ ಸೇರಿದಂತೆ ರಾಜ್ಯದ ಎಲ್ಲರು ಬಳಸಿಕೊಳ್ಳಿ ಎಂದು ಸಚಿವರಾದ ಬೈರತಿ ಸುರೇಶ ಮನವಿ ಮಾಡಿದರು.
ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ 8 ಬ್ಯಾಂಕರ್ಗಳಲ್ಲಿ ನೀರನ್ನು ಪೂರೈಸಲಾಗುವುದು, ಇದು ಬೇಸಿಗೆ ಮುಗಿಯುವ ವರೆಗೂ ಕ್ಷೇತ್ರದಾದ್ಯಂತ ಸಂಚರಿಸುತ್ತದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಟ್ಯಾಂಕರ್ಗಳನ್ನು ಒದಗಿಸಲಾಗುವುದು ಬೈರತಿ ಸುರೇಶ ತಿಳಿಸಿದರು.
ಕಾಂಕ್ರಿಟ್ ರಸ್ತೆಗಳನ್ನು ಅಗತ್ಯ ಇರುವ ಕಡೆ ಹಾಕಲಾಗಿದೆ. ಇನ್ನೂ ಹಲವು ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಬದಲಾಗುತ್ತದೆ. ಚರಂಡಿ ದುರಸ್ಥಿ ಕಾರ್ಯಗಳು ಬಹುತೇಕ ಮುಗಿದಿದ್ದು ಕಳಪೆ ಕಾರ್ಯ ಕಂಡಲ್ಲಿ ತಮ್ಮ ಗಮನಕ್ಕೆ ನೇರವಾಗಿ ತರಬಹುದು ಎಂದು ನೆರೆದಿದ್ದ ಜನರಿಗೆ ಸೂಚಿಸಿದರು.
ಪಡಿತರ ಚೀಟಿ ಇಲ್ಲದ ಕಾರಣ ಗೃಹ ಲಕ್ಷ್ಮೀ ಯೋಜನೆ ಬರುತಿಲ್ಲ ಎಂದು ಅಲ್ಲಿದ್ದ ಕೆಲ ಜನರು ಸಚಿವರ ಗಮನಕ್ಕೆ ತಂದಾಗ, ಪಡಿತರ ಚೀಟಿ ಮಾಡಿಸಲು ಕೌಂಟರ್ ತೆರೆಯಲಾಗಿದೆ ಸೂಕ್ತ ದಾಖಲಾತಿಗಳನ್ನು ಅಲ್ಲಿ ನೀಡಿ ನೊಂದಾಯಿಸುವಂತೆ ಸಚಿವರಾದ ಬೈರತಿ ಸುರೇಶ ಸೂಚಿಸಿದರು.
ಅಂಗವಿಕಲರ ಮಾಶಾಸನ, ವೃದಾಪ್ಯ ವೇತನ, ಪಿಂಚಣಿ ಸೇರಿದಂತೆ ಕೆಲವು ಯೋಜನೆಗಳು ತಮಗೆ ಸಕಾಲಕ್ಕೆ ತಲುಪುತ್ತಿಲ್ಲ ಎಂದು ಕೆಲವರು ಅಹವಾಲುಗಳನ್ನು ನೀಡಿದಾಗ ಸಚಿವರು ಸ್ಥಳದಲ್ಲಿಯೇ ಇದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹರಿಸುವಂತೆ ಸೂಚಿಸಿದರು.
ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುವಂತೆ ಸಚಿವರಲ್ಲಿ ಹಲವರು ಮನವಿ ಮಾಡಿದಾಗ ತಮ್ಮ ವತಿಯಿಂದಲೇ ಧನ ಸಹಾಯ ಮಾಡುವ ಭರವಸೆ ನೀಡಿದರು. ಅಲ್ಲದೇ ಕೆಲ ಶಾಲೆ ಮತ್ತು ಆಸ್ಪತ್ರೆಗೆ ದಾಖಲು ಮಾಡಲು ಸಹ ಸಚಿವರು ಸೂಚಿಸಿದರು.
ಸರ್ಕಾರದ ಯಾವುದೇ ಯೋಜನೆಗಳಿಂದ ಯಾರು ವಂಚಿತರಾಗಬಾರದು. ಅದು ಅರ್ಹರಿಗೆ ತಲುಪಬೇಕು ಎನ್ನುವ ಕಾರಣಕ್ಕೆ ಕೆಲ ಮಾನದಂಡಗಳನ್ನು ವಿಧಿಸಲಾಗಿದೆ. ಜನರ ತೆರಿಗೆ ಹಣದಿಂದಲೇ ಸರ್ಕಾರಗಳು ಜನರಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದು. ಇದಕ್ಕೆ ಸಾಕ್ಷಿ ಎಂಬಂತೆ ನಮ್ಮ ಕಾಂಗ್ರೆಸ್ ಸರ್ಕಾರವಿದೆ. ನಮ್ಮ ಸರ್ಕಾರ ಯಾವತ್ತು ಜನಪರವಾಗಿ ಇರುತ್ತದೆ ಎಂದರು.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ಬಿ.ಬಿ.ಎಂ.ಪಿ, ಆಹಾರ ಇಲಾಖೆ, ಆರೋಗ್ಯ ಇಲಾಖೆ ಬೆಂಗಳೂರು ಒನ್, ಬೆಂಗಳೂರು ಜಲ ಮಂಡಳಿ ಸೇರಿದಂತೆ ಹಲವು ಇಲಾಖೆಗಳ 15 ಕೌಂಟರ್ಗಳನ್ನು ತೆರೆಯಲಾಗಿತ್ತು. ಎಲ್ಲಾ ಕೌಂಟರ್ಗಳನ್ನು ಅಲ್ಲಿ ನೆರೆದಿದ್ದ ಬಹುತೇಕ ಕ್ಷೇತ್ರದ ಜನರು ಬಳಸಿಕೊಂಡರು. 15 ಕೌಂಟರ್ಗಳನ್ನು ತೆರೆದಿದ್ದ ಪರಿಣಾಮ ಹೆಬ್ಬಾಳ ಜನ ಸ್ಪಂದನದಲ್ಲಿ ನೆರೆದಿದ್ದ ಅನೇಕರಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕಿತ್ತು.
ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿಯೇ ಮೊದಲಿಗೆ ಜನಸ್ಪಂದನ ಕಾರ್ಯಕ್ರಮ ನಡೆದಿರುವುದು ಎನ್ನುವುದು ವಿಶೇಷ.
ಬೆಂಗಳೂರು ಜಲ ಮಂಡಳಿ ಅಧ್ಯಕ್ಷರಾದ ರಾಮ ಪ್ರಸಾದ್, ಬಿ.ಬಿ.ಎಂ.ಪಿ ವಲಯ ಆಯುಕ್ತರಾದ ಆರ್. ಸ್ನೇಹಾಲ್, ಬಿ.ಬಿ.ಎಂ.ಪಿ ಜಂಟಿ ಆಯುಕ್ತೆ ಪಲ್ಲವಿ, ಉಪ ಪೊಲೀಸ್ ಆಯುಕ್ತ ಸೈದುಲ್ ಅತಾವತ್, ಡೆಪೂಟಿ ತಹಸಿಲ್ದಾರ್ ವೆಂಕಟೇಶ, ಆರೋಗ್ಯ ಅಧಿಕಾರಿ ಡಾ. ಸವಿತಾ, ಬೆಸ್ಕಾಂ ಕಾರ್ಯ ನಿರ್ವಹಕ ಅಭಿಯಂತರರಾದ ಚಂದ್ರಶೇಖರ್, ಬಿ.ಬಿ.ಎಂ.ಪಿ, ಆಹಾರ ಇಲಾಖೆ ಸೇರಿದ ಹಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.