ಬೆಂಗಳೂರು: ಕರ್ನಾಟಕದ ಅರಣ್ಯ ಪ್ರದೇಶಗಳ ರಕ್ಷಣೆ ಮತ್ತು ಸಂರಕ್ಷಣೆ ಸಂಬಂಧ ಅನೇಕ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರುವಾಗಲೇ, ರಾಜ್ಯ ಸಚಿವ ಕೆ.ಜೆ. ಜಾರ್ಜ್ ಪುತ್ರ ರಾಣಾ ಜಾರ್ಜ್ ಅವರಿಗೆ ನುಗು ವನ್ಯಜೀವಿ ಅಭಯಾರಣ್ಯ ರಸ್ತೆಯಲ್ಲಿ ರಾತ್ರಿ ಹಾಗೂ ಹಗಲು ಸಂಚಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರು ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ರಾಣಾ ಜಾರ್ಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಪರಿಸರ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಸಂಚಾರ ನಡೆಸುವ ಷರತ್ತಿನಡಿ ಅನುಮತಿ ನೀಡಿದೆ. ರಾತ್ರಿ ವೇಳೆ ತಮ್ಮ ಖಾಸಗಿ ಜಮೀನಿಗೆ ತೆರಳಲು ಈ ನಿರ್ಧಾರ ರಾಣಾ ಜಾರ್ಜ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.
ರಾಣಾ ಜಾರ್ಜ್ ಅವರಿಗೆ ಹೆಚ್‌ಡಿ ಕೋಟೆ ತಾಲ್ಲೂಕಿನ ಶಂಬುಗೌಡನಹಳ್ಳಿ ಹಾಗೂ ಲಕ್ಕಸೋಗೆ ಗ್ರಾಮಗಳ ಸುತ್ತಮುತ್ತ ಜಮೀನು ಇದೆ. ಈ ಜಮೀನಿಗೆ ಹೋಗುವ ಮುಖ್ಯ ರಸ್ತೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿಯೇ ಇದೆ. ಇದರಿಂದಾಗಿ ರಾತ್ರಿ ವೇಳೆ ಅರಣ್ಯ ಇಲಾಖೆ ನಿಯಮಗಳ ಮೂಲಕ ಹಾದುಹೋಗುವುದು ಕಠಿಣವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಹೈಕೋರ್ಟ್ ಮೊರೆ ಹೋಗಿದ್ದರು.














