ವಿಜಯಪುರ: ವಕ್ಫ್ ವಿಚಾರದಲ್ಲಿ ಸಚಿವ ಜಮೀರ್ ಅಶ್ವಮೇಧ ಕುದುರೆಯನ್ನು ಕಲಬುರಗಿ, ಬೀದರ್ ಹಾಗೂ ಇತರ ಜಿಲ್ಲೆಗಳಲ್ಲಿ ಯಾರೂ ತಡೆಯಲಿಲ್ಲ. ನಾನು ವಿಜಯಪುರದಲ್ಲಿ ತಡೆದಿದ್ದೇನೆ ಎಂದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಜಮೀರ್ ಅಹ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಜಮೀರ್ ಪ್ರವಾಸ ತಡೆಯಿರಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಹಠಾವೋ, ದೇಶ ಬಚಾವೋ, “ಮಾರಕ ವಕ್ಫ್ ಕಾಯ್ದೆ ನಿರ್ಮೂಲನೆ ನಮ್ಮೆಲ್ಲರ ಗುರಿ’ ಘೋಷಣೆಯೊಂದಿಗೆ ಸೋಮವಾರದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಕೈಬಿಡಲಾಯಿತು.
ವಕ್ಫ್ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ತಮ್ಮೆಲ್ಲ ಅಹವಾಲುಗಳನ್ನು ಸಮಿತಿ ಮುಂದೆ ಮಂಡಿಸಲಾಗುತ್ತಿದೆ. ನೀವು ಧರಣಿ ಕೈಬಿಡಿ ಎಂದು ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶೋಭಾ ಹೋರಾಟ ನಿಲ್ಲಿಸಲಾಗುವುದು ಎಂದರು.