ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ 67ನೇ ವಾರ್ಡಿನ ಮನೆ ಮನೆಗೆ ಭೇಟಿ ನೀಡಿ, ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಮತಯಾಚನೆ ಮಾಡಿದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಜನಸಾಮಾನ್ಯರ ಆರೋಗ್ಯದ ಕಾಳಜಿಯಿಂದ ಉತ್ತಮ ಆಸ್ಪತ್ರೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ನಿರ್ಮಾಣ ಹಾಗೂ ಕೋವಿಡ್ ಅವಧಿಯಲ್ಲಿ 350 ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟು ಮಾನ್ಯ ಸಚಿವರು ಮತಯಾಚನೆಯನ್ನು ಮಾಡಿದರು.
ಚುನಾವಣಾ ಪ್ರಚಾರದ ವೇಳೆಯಲ್ಲಿ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮತಯಾಚನೆಗೆ ತೆರಳಿದ ಸಂದರ್ಭದಲ್ಲಿ ಸ್ಥಳೀಯರು ಸಚಿವರು ಮುಂದೆ ಅನೇಕ ಕುಂದುಕೊರತೆಗಳನ್ನು ತಿಳಿಸಿದರು. ಅವರೆಲ್ಲರ ಅಹವಾಲುಗಳನ್ನು ಸ್ವೀಕರಿಸಿ ಶೀಘ್ರದಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಒಬಿಸಿ ರಾಜ್ಯ ಘಟಕದ ಅಧ್ಯಕ್ಷರಾದ ನೆ.ಲ. ನರೇಂದ್ರ ಬಾಬು, ಶಿವಾನಂದ ಮೂರ್ತಿ, ರೈಲ್ವೆ ನಾರಾಯಣ್, ಶಿವಣ್ಣ, ಕೀರ್ತಿರಾಜ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು.