ಮನೆ ರಾಜ್ಯ ಆಧಿವೇಶನದ ನಡುವೆಯೂ ಸರ್ಕಾರಿ ಶಾಲೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ : ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ...

ಆಧಿವೇಶನದ ನಡುವೆಯೂ ಸರ್ಕಾರಿ ಶಾಲೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ : ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಭರವಸೆ ಈಡೇರಿಸಿದ ಶಿಕ್ಷಣ ಸಚಿವರು

0

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಚಳಿಗಾಲದ ಆಧಿವೇಶನದ ನಡುವೆಯೂ ಸರ್ಕಾರಿ ಶಾಲೆಗಳಿಗೆ ಶಾಲಾ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್ ಮಧು ಬಂಗಾರಪ್ಪ ಅವರು ಭೇಟಿ ನೀಡಿ, ಮಕ್ಕಳ ಸಮಸ್ಯೆಗಳಿಗೆ ಧನಿಯಾಗಿದ್ದಾರೆ.

ಇಂದು ಬೆಳಿಗ್ಗೆ ನಗರದ ಖಂಜರಗಲ್ಲಿ, ವೀರಭದ್ರ ನಗರದ ಉರ್ದು ಶಾಲೆ, ಸರ್ದಾರ್ ಪ್ರೌಢಶಾಲೆ ಹಾಗೂ ಕಿತ್ತೂರು ತಾಲ್ಲೂಕಿನ ಹುಲಿಕಟ್ಟಿ ಮತ್ತು ಕಾದರವಳ್ಳಿ ಶಾಲೆಗೆ ಭೇಟಿ ನೀಡಿದರು.

ಶತಮಾನ ಕಂಡಿರುವ ಖಂಜರಗಲ್ಲಿಯಲ್ಲಿರುವ ಉರ್ದು ಶಾಲೆಯಲ್ಲಿ ಮಕ್ಕಳೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಸಂವಿಧಾನ ಪೀಠಿಕೆ ಓದುವಿಕೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ನಿತ್ಯ ಶಾಲಾ ಮಕ್ಕಳಿಗೆ ವಿದ್ಯಾರ್ಥಿನಿಯರಿಗೆ ಕ್ಷೀರಭಾಗ್ಯ ಯೋಜನೆಯಡಿಯ ಬಿಸಿ ಹಾಲು ವಿತರಿಸಿ, ಸದೃಢವಾದ ಆರೋಗ್ಯದಿಂದರಲು ತಿಳಿಸಿದರು.

ಇನ್ನು ವೀರಭದ್ರನಗರದಲ್ಲಿ ನ ಉರ್ದು ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 254 ವಿದ್ಯಾರ್ಥಿಗಳು ಓದುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿ, ಶಾಲೆಗೆ ಕೂಡಲೇ ಬೆಂಚ್ ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಇದೇ ಶಾಲೆಯಲ್ಲಿ ಪ್ರೌಢಶಾಲೆ ಆರಂಭಿಸಬೇಕು ಎನ್ನುವ ಪೋಷಕರ ಪ್ರಶ್ನೆ ಸಕಾರಾತ್ಮಕವಾಗಿ ಸ್ಪಂದಿಸಿ, ಸ್ಥಳೀಯ ಶಾಸಕರಿಗೆ ಶಾಲೆಯ ಸಮಗ್ರ ಮಾಹಿತಿ ಸಂಗ್ರಹಿಸಿ, ಸಚಿವರಿಗೆ ನೀಡಲು ಸಲಹೆ ನೀಡಿದರು.

ಅಲ್ಲದೇ ಇದೇ ವೇಳೆ 173 ವರ್ಷ ಪೂರೈಸಿರುವ ಸರದಾರ ಶಾಲೆಗೆ ಭೇಟಿ ನೀಡಿ, ಬ್ರಿಟಿಷ ಶೈಲಿಯ ಕಟ್ಟಡ ಹೊಂದಿರುವುದನ್ನು ಗಮನಿಸಿ, ಶಾಲೆಯಲ್ಲಿನ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು. ಇಂತಹ ಪಾರಂಪರಿಕ ಶಾಲೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಿಸಿಯೂಟ ಸವಿದು ಮಕ್ಕಳಿಗೆ ನೀಡಿದ್ದ ಭರವಸೆ ಈಡೇರಿಸಿದ ಸಚಿವರು :

ಆಧಿವೇಶನ ವೀಕ್ಷಣೆಗೆ ತೆರಳಿದ್ದ ಕಿತ್ತೂರು ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ಮಕ್ಕಳನ್ನು ಭೇಟಿ ಮಾಡಿದ್ದ ಸಚಿವ ಮಧು ಬಂಗಾರಪ್ಪ ಅವರು, ಆಧಿವೇಶನ ಮುಗಿಯುವ ನಡುವೆ ನಿಮ್ಮ ಶಾಲೆಗೆ ಬರುತ್ತೇನೆ. ನಿಮ್ಮ ಶಾಲೆಯಲ್ಲಿಯೇ ನಿಮ್ಮನ್ನು ಭೇಟಿ ಮಾಡಿ, ನಿಮ್ಮ ಶಾಲೆಯಲ್ಲಿ ನೀಡುವ ಬಿಸಿಯೂಟವನ್ನು ಮಾಡೋಣ ಎಂದು ಭರವಸೆ ನೀಡಿದ್ದರು. ಅದರಂತೆ ಶಿಕ್ಷಣ ಸಚಿವರು, ಹುಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳ ಜೊತೆ ಕುಳಿತು ಊಟ ಮಾಡುವ ಮೂಲಕ ಮಕ್ಕಳಿಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ.

ಈ ಸಂದರ್ಭದಲ್ಲಿ ಜಂಟಿ ನಿರ್ದೇಶಕರಾದ ಎಂ ಎಂ ಸಿಂಧೂರ, ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ, ಪ್ರಭಾರ ಉಪನಿರ್ದೇಶಕರಾದ ರವಿ ಭಜಂತ್ರಿ, ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಎಸ್ ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಡಿ ಹಿರೇಮಠ, ಇಸಿಓ, ಬಿ.ಆರ್.ಪಿ, ಸಿ.ಆರ್.ಪಿಗಳು ಮತ್ತು ನಗರ ಸೇವಕರು ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಮೈಸೂರು: ಕೌಶಲ್ಯ ಮತ್ತು ನಡವಳಿಕೆ, ಕೆಲಸದ ಸ್ಥಳದಲ್ಲಿ ಸುರಕ್ಷತೆ ಬಗ್ಗೆ ತರಬೇತಿ
ಮುಂದಿನ ಲೇಖನರೈತನಿಂದ ₹4500 ಲಂಚ:ಸೆಸ್ಕ್‌ ಜೂನಿಯರ್‌ ಎಂಜಿನಿಯರ್‌ ಲೋಕಾಯುಕ್ತ ಬಲೆಗೆ