ಮೈಸೂರು: ಮಂಗಳವಾರ ರಾತ್ರಿ ಸಚಿವ ಮಹದೇವಪ್ಪ ಮನೆಯಲ್ಲಿ ಡಿನ್ನರ್ ಆಯೋಜನೆ ಆಗಿತ್ತು. ಊಟಕ್ಕೆ ನಾನು, ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಹೋಗಿದ್ದೆವು. ಅಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಡಿನ್ನರ್ ಮೀಟಿಂಗ್ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದರು.
ಇಂದು ಬೆಳಗ್ಗೆ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. “ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಸಚಿವ ಮಹದೇವಪ್ಪ ಮನೆಯಲ್ಲಿ ಡಿನ್ನರ್ಗೆ ಹೋಗಿದ್ದೆವು. ಅಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಲಿಲ್ಲ. ನಾವು ಅವಾಗವಾಗ ಡಿನ್ನರ್ಗೆ ಸೇರುತ್ತಿರುತ್ತೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇರುತ್ತಾರೆ. ಸಿಎಂ ಬದಲಾವಣೆ ಪ್ರಶ್ನೆ ಸದ್ಯಕ್ಕೆ ಉದ್ಭವಿಸುವುದಿಲ್ಲ” ಎಂದರು.
“ದಲಿತ ಸಿಎಂ ಚರ್ಚೆ ವಿಚಾರವಾಗಿ ಸದ್ಯಕ್ಕೆ ಯಾವುದೇ ಚರ್ಚೆ ಆಗಿಲ್ಲ” ಎಂದ ಪರಮೇಶ್ವರ್ ನಿಮಗೆ ಸಿಎಂ ಆಗುವ ಆಸೆ ಇಲ್ವಾ ಎಂಬ ಪ್ರಶ್ನೆಗೆ “ಸದ್ಯಕ್ಕೆ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಆ ಬಗ್ಗೆ ಮಾತನಾಡುವುದು ಬೇಡ” ಎಂದು ಹೇಳಿದರು.
ಹರಿಯಾಣ ಸೋಲಿಗೆ ಮುಡಾ ಕಾರಣವೇ?: “ಹರಿಯಾಣ ವಿಧಾನಸಭಾ ಚುನಾವಣೆ ಸೋಲಿಗೆ ಬೇರೆ ಬೇರೆ ಕಾರಣಗಳಿವೆ. ಅದನ್ನು ಹೈಕಮಾಂಡ್ ವಿಶ್ಲೇಷಣೆ ಮಾಡುತ್ತದೆ. ಹರಿಯಾಣದಲ್ಲಿ ಪ್ರಧಾನಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಡಾ ವಿಚಾರವನ್ನು ಭಾಷಣ ಮಾಡಿದ್ದು, ಯಾವುದೇ ಎಫೆಕ್ಟ್ ಆಗಿಲ್ಲ. ಮುಡಾ ಬಗ್ಗೆ ಮೈಸೂರು ಜನರಿಗೆ ಗೊತ್ತಿಲ್ಲ. ಇನ್ನು ಹರಿಯಾಣದ ಜನರಿಗೆ ಏನು ಗೊತ್ತು? ಹರಿಯಾಣ ಸೋಲಿಗೆ ಹೈಕಮಾಂಡ್ ವಿಶ್ಲೇಷಣೆ ಮಾಡುತ್ತದೆ” ಎಂದರು.
“18ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಚಾರವನ್ನು ಇಡುತ್ತೇವೆ. ಅಲ್ಲಿ ಚರ್ಚೆ ಮಾಡಲಾಗುವುದು. ವರದಿ ಬಿಡುಗಡೆ ಬಗ್ಗೆ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಿದೆ” ಎಂದು ಪರಮೇಶ್ವರ್ ತಿಳಿಸಿದರು.