ಮನೆ ರಾಜಕೀಯ ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕು, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ರಮೇಶ್‌ ಜಾರಕಿಹೊಳಿ

ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕು, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ರಮೇಶ್‌ ಜಾರಕಿಹೊಳಿ

0

ಅಥಣಿ (Athani )- ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಗೋಕಾಕ ಶಾಸಕ, ಸಚಿವ ಸ್ಥಾನ ಆಕಾಂಕ್ಷಿ ರಮೇಶ ಜಾರಕಿಹೊಳಿ (Ramesh Jarakiholi) ಹೇಳಿದ್ದಾರೆ.

ಸಚಿವ ಸಂಪುಟ ಪುನರ್‌ರಚನೆ ಮಾತುಗಳು ಕೇಳಿಬರುತ್ತಿರುವ ನಡುವೆ, ಆಕಾಂಕ್ಷಿಗಳಾಗಿರುವ ರಮೇಶ ಜಾರಕಿಹೊಳಿ ಹಾಗೂ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಇಲ್ಲಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

 ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರಲಿದೆ ಎಂದರು.

ಮಾಸಂತ್ಯ ಅಥವಾ ಜೂನ್‌ನಲ್ಲಿ ಗೋಕಾಕದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುವ ಯೋಜನೆ ಇದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಆಗಸ್ಟ್‌ನಲ್ಲಿ ಅಹಿಂದ ಸಮಾವೇಶ ನಡೆಸಲಾಗುವುದು. 4ರಿಂದ 5 ಲಕ್ಷ ಮಂದಿ ಸೇರಿಸಲಾಗುವುದು ಎಂದರು.

ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಿಲ್ಲ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ವರಿಷ್ಠರೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಪಿಎಸ್‌ಐ ಪರೀಕ್ಷಾ ಅಕ್ರಮದ ಬಗ್ಗೆ ದಾಖಲೆ ಇದ್ದರೆ ಸಿಐಡಿಗೆ ಕೊಡಲಿ. 3 ಬಾರಿ ನೋಟಿಸ್ ಕೊಟ್ಟಿದ್ದರೂ ಹಾಜರಾಗಿಲ್ಲ. ಬಿಟ್ ಕಾಯಿನ್ ವಿಚಾರದಲ್ಲೂ ಕೇವಲ ಹೇಳಿಕೆ ನೀಡಿ ದಾರಿ ತಪ್ಪಿಸಿದ್ದರು ಎಂದು ಟೀಕಿಸಿದ ಅವರು, ಅಕ್ರಮದಲ್ಲಿ ಯಾವುದೇ ಅಧಿಕಾರಿ ಅಥವಾ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದರೂ ಅವರ ತಲೆದಂಡ ಆಗಲೇಬೇಕು. ಭ್ರಷ್ಟಾಚಾರದ ವಿಷಯದಲ್ಲಿ ಕ್ಷಮೆ ಇಲ್ಲ ಎಂದರು.

ಕಾಂಗ್ರೆಸ್ ನಾಯಕರ ಕುರಿತು ಮಾತನಾಡಲು ಬಹಳಷ್ಟು ವಿಷಯಗಳಿವೆ. ಆದರೆ, ಪಕ್ಷದ ವರಿಷ್ಠರು ಆದೇಶಿಸಿದ್ದರಿಂದ ಎರಡು ಬಾರಿ ಹಿಂದೆ ಸರಿದೆ. ವರಿಷ್ಠರು ಅವಕಾಶ ಕೊಟ್ಟರೆ ಕಾಂಗ್ರೆಸ್ ಮುಖಂಡರ ಬಂಡವಾಳ ಬಿಚ್ಚಿಡುತ್ತೇನೆ. ಆ ಕಾಲ ಬರಲಿದೆ. ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನಾನು ಅಧ್ಯಕ್ಷನೇ ಅಲ್ಲ. ನನ್ನ ಮಗ ಅಧ್ಯಕ್ಷ ಆಗಿದ್ದಾನೆ. ಸ್ವತಂತ್ರವಾಗಿ ಉದ್ಯೋಗ ಮಾಡುತ್ತಿದ್ದಾನೆ. ಅವ್ಯವಹಾರ ಆಗಿದ್ದರೆ, ಹಣ ತುಂಬದಿದ್ದರೆ ಬ್ಯಾಂಕ್‌ನವರು ಈವರೆಗೆ ಬಿಡುತ್ತಿದ್ದರೇ? ಕಾಂಗ್ರೆಸ್‌ನವರ ಆರೋಪ ಸುಳ್ಳು ಎಂದರು.