ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಕರ್ತವ್ಯದಲ್ಲಿದ್ದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡ ಸಿಬ್ಬಂದಿಗೆ ರೂ. 25 ಲಕ್ಷ ಪರಿಹಾರ ವಿತರಿಸಲಾಗಿದೆ. ಬಿ.ಡಿ. ಸುನೀಲಕುಮಾರ್ ಎಂಬ ಚಾಲಕ-ನಿರ್ವಾಹಕ, ಹಾಸನ ವಿಭಾಗದ ಅರಕಲಗೂಡು ಘಟಕದ ಸಿಬ್ಬಂದಿಗೆ ಈ ಪರಿಹಾರ ಹಣವನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಹಸ್ತಾಂತರಿಸಿದರು.
ಸುನೀಲಕುಮಾರ್ ಬಿ.ಡಿ. ತಮ್ಮ ಕರ್ತವ್ಯದ ವೇಳೆ ಅಪಘಾತಕ್ಕೆ ಸಿಲುಕಿ ಬಲಗಾಲಿನ ಮಂಡಿಯ ಕೆಳಗೆ ಕಾಲು ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ಅವರಿಗೆ 8 ತಿಂಗಳು 14 ದಿನಗಳ ಕಾಲ ಐ.ಒ.ಡಿ ಸೌಲಭ್ಯ ಒದಗಿಸಲಾಗಿದ್ದು, ಸಂಪೂರ್ಣ ವೈದ್ಯಕೀಯ ವೆಚ್ಚವಾದ ರೂ.4,85,762 ನ್ನು ನಿಗಮವೇ ಭರಿಸಿದೆ. ನಂತರ, ಅವರಿಗೆ ತಾಂತ್ರಿಕ ಸಹಾಯಕ ಹುದ್ದೆ ನೀಡಲಾಗಿದ್ದು, ಮುಂದಿನ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ಇಂದು ನಡೆದ ಕಾರ್ಯಕ್ರಮದಲ್ಲಿ, ಅಪಘಾತದಿಂದ ಸಾವನ್ನಪ್ಪಿದ ಇಬ್ಬರು ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ಚೆಕ್ ವಿತರಿಸಲಾಯಿತು. ಇದಲ್ಲದೇ, ಇತರ ಕಾರಣಗಳಿಂದ (ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮುಂತಾದವು) ಮೃತಪಟ್ಟ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ ಒಟ್ಟು ರೂ.3.10 ಕೋಟಿ ಪರಿಹಾರ ವಿತರಿಸಲಾಯಿತು.
ಸಂಚಾರ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡುತ್ತಾ, “ಸಿಬ್ಬಂದಿಯ ಜೀವ ಅಮೂಲ್ಯ. ಅವರನ್ನು ಮರಳಿ ತರುವ ಸಾಧ್ಯವಿಲ್ಲ, ಆದರೆ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದೇ ನಮ್ಮ ಹೊಣೆ” ಎಂದರು. ಹಣವನ್ನು ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಮತ್ತು ಕುಟುಂಬದ ಸುಸ್ಥಿರತೆಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವರು ಸಲಹೆ ನೀಡಿದರು.
ಕರ್ತವ್ಯದಲ್ಲಿದ್ದಾಗ ಅಥವಾ ಇಲ್ಲದಿದ್ದಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗೆ ರೂ.1 ಕೋಟಿ ಅಪಘಾತ ವಿಮಾ ಪರಿಹಾರ.
- ಈವರೆಗೆ 24 ನೌಕರರ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ವಿತರಣೆ.
- ನೌಕರರ ಆರೋಗ್ಯಕ್ಕಾಗಿ “ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆ” ಜಾರಿಗೆ, ರಾಜ್ಯದ 300ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ.
- ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಕ್ಯಾನ್ಸರ್ ಮುಂತಾದ ಕಾಯಿಲೆಯಿಂದ ಮೃತರಾದ ಸಿಬ್ಬಂದಿಗೆ ಪರಿಹಾರ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ವಿ. ಅವರು, ನಿಗಮದ ಎಲ್ಲಾ ಯೋಜನೆಗಳನ್ನು ಕಾರ್ಮಿಕರ ಸದುಪಯೋಗಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದರು. “ಹಣವನ್ನು ಜಾಣ್ಮೆಯಿಂದ ಬಳಸಿ, ಮೋಸಗೊಳ್ಳದಿರಿ. ಸಂಸ್ಥೆ ಸದಾ ನಿಮ್ಮೊಂದಿಗಿದೆ ಎಂದು ಬೋಧಿಸಿದರು.