ಮನೆ ರಾಜ್ಯ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

0

ಬೆಂಗಳೂರು : ಇಂದಿನಿಂದ 5 ದಿನ ನಡೆಯಲಿರುವ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.

ಇಂದು (ನ.17) ಬೆಳಗ್ಗೆ 10:40ಕ್ಕೆ ಬಸವನಗುಡಿಯ ದೊಡ್ಡಬಸವಣ್ಣ ದೇವಾಲಯದ ಆವರಣದಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಷೆಗೆ ಚಾಲನೆ ನೀಡಿದರು. ಇಂದಿನಿಂದ ಶುಕ್ರವಾರದವರೆಗೂ (ನ.21) ಪರಿಷೆ ನಡೆಯಲಿದೆ.

ಚಾಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಡಲೆಕಾಯಿ ಪರಿಷೆಗೆ 500 ವರ್ಷಗಳ ಇತಿಹಾಸವಿದೆ. ಕೆಂಪೇಗೌಡರ ಕಾಲದಲ್ಲಿ ಆರಂಭವಾಯ್ತು. ಈ ಬಾರಿ ಪ್ಲಾಸ್ಟಿಕ್ ಬಳಸಿದರೆ ಅಂಗಡಿಗಳನ್ನು ಕ್ಲೋಸ್ ಮಾಡಲು ಹೇಳಿದ್ದೇನೆ. ಜೊತೆಗೆ ಈ ಬಾರಿ ಶುಲ್ಕ ರಹಿತ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿದ್ದೇವೆ.

ನಾಲ್ಕೈದು ರೋಡ್‌ಗಳಲ್ಲಿ ಲೈಟಿಂಗ್‌ಗಳನ್ನು ಹಾಕಿದ್ದೇವೆ. ಇನ್ನೂ ಹೂವಿನ ಅಲಂಕಾರವನ್ನು ಚೆನ್ನಾಗಿ ಮಾಡಿದ್ದಾರೆ. ಮುಂದಿನ ವರ್ಷ ಇನ್ನೂ ಚೆನ್ನಾಗಿ ಪರಿಷೆ ಮಾಡಲಿದ್ದೇವೆ. ಕಳೆದ ವರ್ಷ 4-5 ಲಕ್ಷ ಜನ ಪರಿಷೆಗೆ ಬಂದಿದ್ರು, ಈ ವರ್ಷ ಇನ್ನೂ ಎರಡು ಲಕ್ಷ ಜನ ಹೆಚ್ಚು ಬರೋ ಸಾಧ್ಯತೆ ಇದೆ. ಜಿಬಿಎಯವರು ಅನುದಾನ ಕೊಡುತ್ತಿದ್ದು, ಹೆಚ್ಚಾಗಿ ಕೆಲಸ ಮಾಡಿದ್ದಾರೆ.

ಮುಜರಾಯಿ ಇಲಾಖೆ ಸಹ ಕೆಲಸ ಮಾಡ್ತಿದೆ. ಹೆಚ್ಚಿನ ಜನ ಕಡಲೆಕಾಯಿ ಪರಿಷೆಗೆ ಬರಲಿ. ಸುತ್ತಮುತ್ತಲಿನ ದೇವಾಲಯದ ದರ್ಶನ ಮಾಡಲಿ. ಈ ವೇಳೆ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.