ಮನೆ ರಾಜ್ಯ 5 ವರ್ಷದಲ್ಲಿ 5200 ಕೋಟಿ ನಷ್ಟ: ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ

5 ವರ್ಷದಲ್ಲಿ 5200 ಕೋಟಿ ನಷ್ಟ: ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ

0

ಬೆಂಗಳೂರು: ‘ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ರೂ. ೫,೨೦೦ ಕೋಟಿ ನಷ್ಟ ಆಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ಚೇತನಕ್ಕೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ’ ಎಂದರು.


‘ತೈಲ ಬೆಲೆ, ಸಿಬ್ಬಂದಿ ವೇತನ, ಹಾಗೂ ವಾಹನ ಬಿಡಿಭಾಗಗಳ ಬೆಲೆ ಹೆಚ್ಚಳದಿಂದ ಆರ್ಥಿಕ ಹೊರೆ ಉಂಟಾಗಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ ೧೫ರಷ್ಟು ಹೆಚ್ಚಿಸಲಾಗಿದೆ’ ಎಂದರು. ‘ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ೨೦೨೪-೨೫ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ರೂ. ೯,೯೭೮ ಕೋಟಿ ಅನುದಾನ ಪೈಕಿ ರೂ. ೭,೭೯೬ ಕೋಟಿ ಈಗಾಗಲೇ ಮಂಜೂರಾಗಿದೆ. ಬಾಕಿ ಸುಮಾರು ೨ ಸಾವಿರ ಕೋಟಿ ಬಿಡುಗಡೆ ಆಗಬೇಕಿದೆ. ಅನುದಾನ ಮಂಜೂರಾದ ಬಳಿಕ ಸಾರಿಗೆನಿಗಮಗಳಿಗೆ ನೀಡಲಾಗುವುದು’ ಎಂದರು.

‘ನಮ್ಮ ಸರ್ಕಾರ ಅಧಿಕಾರ ಬಂದ ಬಳಿಕ ಇದುವರೆಗೂ ೫,೩೬೦ ಬಸ್ ಖರೀದಿಸಲಾಗಿದೆ. ಬಿಎಂಟಿಸಿ ನಿಗಮ ಹೊರತುಪಡಿಸಿದರೆ ಹಿಂದಿನ ಸರ್ಕಾರವು ಇತರ ಸಾರಿಗೆ ನಿಗಮಗಳಿಗೆ ಬಸ್ ಖರೀದಿಗೆ ಮುಂದಾಗಿರಲಿಲ್ಲ. ೨೦೧೬ರಿಂದ ೨೩ರವರೆಗೆ ೧೪ ಸಾವಿರ ನೌಕರರು ನಿವೃತ್ತರಾಗಿದ್ದು, ನೇಮಕಾತಿ ನಡೆದಿರಲಿಲ್ಲ. ಖಾಲಿ ಹಾಗೂ ತೆರವಾಗಿರುವ ಹುದ್ದೆಗಳಿಗೆ ೯ ಸಾವಿರ ಮಂದಿಯನ್ನು ನೇಮಕಾತಿ ಮಾಡಲಾಗಿದೆ. ೧ ಸಾವಿರ ಮಂದಿಗೆ ಅನುಕಂಪ ಆಧಾರದ ಮೇರೆಗೆ ಉದ್ಯೋಗ ನೀಡಲಾಗಿದೆ.

ದಿನಕ್ಕೆ ೧.೯೬ ಲಕ್ಷ ಟ್ರಪ್‌ಗಳು ಸಾರಿಗೆ ನಿಗಮಗಳ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದರು. ‘ಸಡೃಢ ಆರೋಗ್ಯಕ್ಕಾಗಿ ಕೆಎಸ್‌ಆರ್‌ಟಿಸಿ ನೌಕರರು ವಂತಿಗೆ ರೂಪದಲ್ಲಿ ಮಾಸಿಕ ರೂ. ೬೫೦ ಪಾವತಿಸಿದರೆ ನೌಕರನ ಕುಟುಂಬಸ್ಥರು ಚಿಕಿತ್ಸೆ ಪಡೆಯಬಹುದಾಗಿದೆ. ಇತರ ಸಾರಿಗೆ ನಿಗಮಗಳಿಗೂ ಯೋಜನೆ ವಿಸ್ತರಿಸಿದ್ದು ನೌಕರರಿಂದ ದಾಖಲಾತಿ ಪಡೆಯಲಾಗುತ್ತಿದೆ. ಇನ್ನೂ ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಒಡಂಬಡಿಕೆಯಾದ ರಾಜ್ಯದ ೩೫೦ ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆ ಪಡೆಯಬಹುದು’ ಎಂದು ಸಚಿವರು ವಿವರಿಸಿದರು.