ಶಿವಮೊಗ್ಗ : ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವಾಗಿ ಮತ್ತು ಉದಾರವಾಗಿ ಸ್ಪಂದಿಸಿ ನಿಯಮಾನುಸಾರ ಪರಿಹಾರಗಳನ್ನು ಒದಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮತ್ತು ಅಡಿಕೆ ಬೆಳೆಯ ಎಲೆಚುಕ್ಕಿ ರೋಗದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿ ಸ್ವಲ್ಪ ತಡವಾಗಿ ಮಳೆ ಆರಂಭವಾಗಿದೆ. ಅಂತಹ ಪ್ರಾಕೃತಿಕ ಹಾನಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ, ಕೆಲವೆಡೆ ರಸ್ತೆ, ಸೇತುವೆ, ಬೆಳೆ ಹಾನಿ ಹೀಗೆ ಕೆಲವೆಡೆ ಮೂಲಭೂತ ಸೌಕರ್ಯಗಳಿಗೆ ಹಾನಿ ಸಂಭವಿಸಿದ್ದು ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿ ಎಚ್ಚರಿಕೆಯಿಂದಿದ್ದು ಶೀಘ್ರವಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹಳೆಯ ಶಾಲೆ ಕೆಡುವುದು ಮತ್ತು ಮರಗಳನ್ನು ಕಟಾವು ಮಾಡುವುದು ಅತಿ ಮುಖ್ಯ. ಇದು ತುಂಬಾ ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ಡಿಡಿಪಿಐ ಅವರು ಶಿಥಿಲಾವಸ್ಥೆಯಲ್ಲಿರುವ ಶಾಲೆ ಕೆಡವಲು ಕ್ರಮ ಕೈಗೊಳ್ಳಬೇಕು. ಹಾಗೂ ಈ ಕುರಿತು ಪಿಡಬ್ಲ್ಯುಡಿ ಮತ್ತು ಪಿಆರ್‍ಇಡಿ ಯವರು ಶುಕ್ರವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.
ಶಿವಮೊಗ್ಗದ ಮಳೆಹಾನಿ ಪ್ರದೇಶಗಳಿಗೆ ಭೇಟಿ:
ಸಭೆಯ ನಂತರ ಸಚಿವರು ಶಿವಮೊಗ್ಗದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಹೊಸಮನೆ ರಾಜಾಕಾಲುವೆ ಕಾಮಗಾರಿ, ದುರ್ಗಿಗುಡಿ ಸವಾರ್‍ಲೈನ್ ರಸ್ತೆಯಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗೆ ಭೇಟಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‍ಕುಮಾರ್, ಶಾಸಕರಾದ ಆರಗ ಜ್ಞಾನೇಂದ್ರ, ಶಾರದಾ ಪೂರ್ಯ ನಾಯ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.