ದಾವಣಗೆರೆ : ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರ ಸಮರ್ಥ್ ಗೆಲುವಿಗಾಗಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಅವರ ಕುಟುಂಬಸ್ಥರು ಹಳೇ ಪೇಟೆ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಉತ್ಸವದಲ್ಲಿ ಕೆಂಡ ತುಳಿದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರತಿ ವರ್ಷದಂತೆ ವೀರಭದ್ರೇಶ್ವರ ಅಗ್ನಿಕುಂಡ ಉತ್ಸವದಲ್ಲಿ ಸಚಿವರ ಕುಟುಂಬ ಭಾಗಿಯಾಗಿತ್ತು. ಈ ವೇಳೆ ಸಚಿವರು ಹಾಗೂ ಅವರ ಪತ್ನಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಪುತ್ರ ಸಮರ್ಥ್ ಶಾಮನೂರು ಹಾಗೂ ಪುತ್ರಿ ಶ್ರೇಷ್ಠ ಶಾಮನೂರು ಕೆಂಡ ತುಳಿದರು. ಬಳಿಕ ಸಮರ್ಥ್ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಇದರ ನಡುವೆ ದಾವಣಗೆರೆ ಚುನಾವಣಾ ಕಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡದ ಕಾಂಗ್ರೆಸ್‌ಗೆ ವಿರೋಧದ ಬಿಸಿ ತಟ್ಟಿದೆ. ಪಕ್ಷೇತರ ಅಭ್ಯರ್ಥಿ ಸೈಯದ್ ಸೈಫುಲ್ಲಾ ನಿವಾಸಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಆಗಮಿಸಿದ್ದ ವೇಳೆ, ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದ್ದರು.
ಅಲ್ಲದೇ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆದ ಬಳಿಕ, ಅವರ ಬೆಂಬಲಿಗರು ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಬೆಂಬಲಕ್ಕೆ ನಿಂತಿದ್ದಾರೆ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆಯ ಉಪಚುನಾವಣೆ ಏಪ್ರಿಲ್ 9 ರಂದು ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.















