ಮನೆ ಕಾನೂನು ಅಪ್ರಾಪ್ತ ಪತ್ನಿ, ಮಗುವಿಗೆ ಆರೋಪಿಯೇ ಜೀವನಾಧಾರ: ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಅಪ್ರಾಪ್ತ ಪತ್ನಿ, ಮಗುವಿಗೆ ಆರೋಪಿಯೇ ಜೀವನಾಧಾರ: ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

0

ಬೆಂಗಳೂರು: ಅಪ್ರಾಪ್ತೆಯನ್ನು ವಿವಾಹವಾಗಿ ಮಗು ಜನನಕ್ಕೆ ಕಾರಣವಾಗಿದ್ದ ಆರೋಪಿಯೇ ಪತ್ನಿ ಹಾಗೂ ಮಗುವಿಗೆ ಜೀವನಾಧಾರವಾಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ತನ್ನ ವಿರುದ್ಧ ಪೋಕ್ಸೋ, ಬಾಲ್ಯ ವಿವಾಹ ತಡೆ ಕಾಯ್ದೆ ಮತ್ತು ಐಪಿಸಿ ಅಡಿಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ದಾಖಲಿಸಿರುವ ಪ್ರಕರಣ ರದ್ದು ಕೋರಿ 20 ವರ್ಷದ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್​ ಚಂದನಗೌಡರ್​ ಅವರಿದ್ದ ನ್ಯಾಯಪೀಠ ಪ್ರಕರಣ ರದ್ದುಗೊಳಿಸಿತು.

ವಿಚಾರಣೆ ವೇಳೆ ಅಪ್ರಾಪ್ತೆ (ಅರ್ಜಿದಾರನ ಪತ್ನಿ), ಆಕೆಯ ತಾಯಿ ಜಂಟಿ ಪ್ರಮಾಣ ಪತ್ರ ಸಲ್ಲಿಸಿದರು. ಕಾನೂನಿನ ಅರಿವಿಲ್ಲದೆ ಅರ್ಜಿದಾರ ಹಾಗೂ ತನ್ನ ಮಗಳ ಮದುವೆ ಅನೀರಿಕ್ಷಿತವಾಗಿ ನಡೆದಿದೆ. ಬಳಿಕ ಮಗಳು ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ. ವಿವಾಹಕ್ಕೆ ಕಾನೂನು ಬದ್ಧ ವಯಸ್ಸು ತಲುಪಿದ ಕೂಡಲೇ ದಂಪತಿ ಕಾನೂನಿನ ಅಡಿಯಲ್ಲಿ ವಿವಾಹ ನೋಂದಾಯಿಸಿಕೊಳ್ಳುತ್ತಾರೆ ಎಂದು ನ್ಯಾಯಪೀಠಕ್ಕೆ ಅಪ್ರಾಪ್ತೆಯ ತಾಯಿ ತಿಳಿಸಿದರು.

ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಸಂತ್ರಸ್ತೆಯ ಪಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದು, ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತರಾಗಿದ್ದಾರೆ. ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದ್ದರೆ ಕುಟುಂಬವೂ ಸಂಕಷ್ಟಕ್ಕೀಡಾಗುತ್ತದೆ. ಪತ್ನಿ ಹಾಗೂ ಮಗುವೂ ದುಃಖಮಯ ಬದುಕು ಸಾಗಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು, ಅರ್ಜಿ ಪುರಸ್ಕರಿಸಿ ಆರೋಪಿಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.

ಅಲ್ಲದೆ, ಪೋಕ್ಸೊ ಕಾಯ್ದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದಾಗಿದೆ. ಬಾಲ್ಯ ವಿವಾಹದಿಂದ ಆಗುವ ಪರಿಣಾಮ ಅರಿಯದೆ ಪರಸ್ಪರ ಒಮ್ಮತದಿಂದ ಇಬ್ಬರು ಹದಿಹರೆಯದವರು ಲೈಂಗಿಕ ಸಂಭೋಗ ನಡೆಸುವುದರಿಂದ ಅದನ್ನು ಅಪರಾಧೀಕರಿಸುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ಅಪ್ರಾಪ್ತ ವಯಸ್ಕರೊಂದಿಗೆ ಸಮ್ಮತಿಯಿಂದ ಲೈಂಗಿಕ ಸಂಭೋಗ ನಡೆಸುವುದು ಪೋಕ್ಸೊ ಕಾಯ್ದೆಯಡಿ ಅಪರಾಧ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ಆರೋಪಿಯ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರೆದಲ್ಲಿ ಸಂತ್ರಸ್ತೆ ಹಾಗು ಮಗು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.

ಆರೋಪಿ ಮತ್ತು ಸಂತ್ರಸ್ತೆ ಸಮಾಜದ ಆರ್ಥಿಕ ಹಿಂದುಳಿದ ವರ್ಗದಿಂದ ಬಂದವರು. ಹಾಗಾಗಿ ಪ್ರಕರಣ ಸಂಬಂಧ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣ ರದ್ದುಗೊಳಿಸುವುದು ಸೂಕ್ತ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಆಂಧ್ರ ಮೂಲದ 20ರ ಹರೆಯದ ಆರೋಪಿಯು 16 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸಿ ವಿವಾಹವಾಗಿದ್ದರು. ಅಪ್ರಾಪ್ತೆಯನ್ನು ಮದುವೆಯಾದ ಆರೋಪದಲ್ಲಿ ಯುವಕನ ವಿರುದ್ಧ ಐಪಿಸಿಯ ಸೆಕ್ಷನ್ 366(ಎ), 376(1) ಮತ್ತು ಪೋಕ್ಸೋ ಕಾಯ್ದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ ಕಾಯ್ದೆಯ 9 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ರದ್ದುಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.