ಪ್ರವಾಸ ಎಂಬ ಹವ್ಯಾಸ ಉದ್ಯಮವಾಗಿ ಪರಿವರ್ತನೆಯಾಗಿ ಸರ್ಕಾರ ಮತ್ತು ಖಾಸಗಿ ಬಂಡವಾಳದಾರರಿಗೆ ಸಂಪಾದನೆಯ ದಾರಿಯಾಗಿ ಬದಲಾಗಿರುವುದರ ಹೊರತಾಗಿಯೂ ನಿಸರ್ಗ ಸಹಜ ಸೌಂದರ್ಯವನ್ನು ಅದರ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪರಿಸರ ಪ್ರೇಮಿಗಳ ಆಶಯಗಳು ಕಳೆಗುಂದಿಲ್ಲ.
ಈ ಸಮಯಕ್ಕೆ ಅಂದರೆ ಸೆಪ್ಟೆಂಬರ್ ಮತ್ತು ನಂತರದ ದಿನಗಳಲ್ಲಿ ಪ್ರಾಕೃತಿಕ ಸೌಂದರ್ಯದೊಂದಿಗೆ ಕಲಾತ್ಮಕ, ಚಾರಿತ್ರಿಕ ಕೌತುಕದ ಕ್ಷಣಗಳನ್ನು ಒದಗಿಸಿಕೊಡಬಲ್ಲ ಆಕರ್ಷಕ ಮಿರ್ಜಾನ್ ಕೋಟೆ ನಿಸರ್ಗ ಸುಂದರಿಯಂತೆ ಪ್ರವಾಸ ಪ್ರಿಯರನ್ನು ಆಕರ್ಷಿಸುತ್ತಿದೆ.
ಉಡುಪಿ, ಕುಂದಾಪುರ, ಬೈಂದೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ಅತ್ತ ಉತ್ತರ ಕನ್ನಡ ಜಿಲ್ಲೆಯ ಕುಮಟಾವನ್ನು ಸಂಪರ್ಕಿಸುತ್ತದೆ. ಇದರ ಸನಿಹದಲ್ಲೇ ಇತಿಹಾಸದ ಕಥೆ ಹೇಳುವ ಮಿರ್ಜಾನ್ ಕೋಟೆ ಇದೆ. ಯಾವುದೇ ಪ್ರವೇಶ ಶುಲ್ಕ ಇಲ್ಲದೆ ವೈಭವಯುತ, ಸಂಘರ್ಷಭರಿತ ಚರಿತ್ರೆಯ ಪುಟಗಳನ್ನಿಲ್ಲಿ ತೆರೆದು ನೋಡಬಹುದು!
ಮಿರ್ಜಾನ್ ಕೋಟೆ ಯನ್ನು ಯಾರು ಸ್ಥಾಪಿಸಿದರು ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಒಂದೆಡೆ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ವಶದಲ್ಲಿದ್ದ ಸಾಮಂತ ಶರೀಫ್ ಉಲ್ ಮುಲ್ಕ್ ಹದಿನಾರನೇ ಶತಮಾನದ ಆರಂಭದಲ್ಲಿ ಈ ಕೋಟೆಯನ್ನು ನಿರ್ಮಿಸಿದ ಎಂದಿದ್ದರೆ ಮತ್ತೊಂದೆಡೆ ಹದಿನಾರನೇ ಶತಮಾನದಲ್ಲಿ ಪಾರುಪತ್ಯ ನಡೆಸುತ್ತಿದ್ದ ರಾಣಿ ಚೆನ್ನ ಬೈರಾದೇವಿ ಇದರ ನಿರ್ಮಾತೃ ಎಂದು ಹೇಳಲಾಗುತ್ತದೆ. ಹನ್ನೆರಡನೇ ಶತಮಾನದ ನವಾಯತ ಸುಲ್ತಾನರ ಕಾಲದಲ್ಲಿಯೇ ಇದು ತಲೆಯೆತ್ತಿದೆ ಎನ್ನುವವರೂ ಇದ್ದಾರೆ.
ಏನೇ ಇದ್ದರೂ ಇದರ ಒಡೆಯರ ಸೌಂದರ್ಯ ಪ್ರಜ್ಞೆ, ರಕ್ಷಣಾತ್ಮಕ ದೂರದರ್ಶಿತ್ವ ಪ್ರಶಂಸೆಗೆ ಅರ್ಹ. ಸ್ಥಳೀಯ ಕೆಂಪು ಕಲ್ಲು ಅಥವಾ ಮುರಕಲ್ಲುಗಳಿಂದ ಅಥವಾ ಲ್ಯಾಟರೈಟ್ ಕಲ್ಲುಗಳಿಂದ ರಚಿಸಲ್ಪಟ್ಟ ಸುಭದ್ರವಾದ ಮತ್ತು ಯೋಜನಾಬದ್ಧ ರಚನೆ. ಅಘನಾಶಿನಿ ನದಿಯ ದಡದಲ್ಲಿ ಸಮುದ್ರಕ್ಕಿಂತ ತುಸುವೇ ದೂರದಲ್ಲಿ ನೆಲೆ ನಿಂತಿರುವ ಮಿರ್ಜಾನ್ ಕೋಟೆ ಭಾರತೀಯ ಮತ್ತು ವಿದೇಶಿ ವಾಸ್ತು ಶೈಲಿಯ ಮಿಶ್ರಣದಂತಿದೆ. ಪೋರ್ಚುಗೀಸರ ಪ್ರಭಾವ ಸಾಕಷ್ಟು ಗೋಚರವಾಗುತ್ತದೆ.
ವಿಜಯನಗರ ಅರಸರ ಕಾಲದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಕೋಟೆ ಅವರ ನಂತರ ಬಹುಮನಿ ಸುಲ್ತಾನರು, ಆದಿಲ್ ಶಾಹಿ, ಉತ್ತರ ಕನ್ನಡದ ಚಿಕ್ಕರಸು ಮನೆತನ, ಮುಂದುವರಿದು ಹೈದರಾಲಿ ಟಿಪ್ಪುವರೆಗೆ ಮುಂದುವರೆಯುತ್ತದೆ. ಟಿಪ್ಪುವಿನ ಮರಣಾನಂತರ ಬ್ರಿಟಿಷರು ತಮ್ಮ ರಕ್ಷಣೆ ಮತ್ತು ಸಂಗ್ರಹಣೆಯ ಉದ್ದೇಶದಿಂದ ಈ ಕೋಟೆಯನ್ನು ಬಳಸತೊಡಗುತ್ತಾರೆ. ಸುಮಾರು 12 ಎಕ್ರೆ ವಿಸ್ತೀರ್ಣದಲ್ಲಿ ಆವರಿಸಿಕೊಂಡಿರುವ ಅಷ್ಟ ಕೋನ ಕೃತಿಯ ಈ ವಾಸ್ತು ಶಿಲ್ಪ ಎತ್ತರದ ದಿಬ್ಬದ ಮೇಲಿದ್ದು ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ ಸನಿಹದ ಕುದುರೆ ಹಳ್ಳದಿಂದ ಈ ಕಂದಕಗಳಿಗೆ ನೀರು ಬಿಡುವ ಮೂಲಕ ವೈರಿಗಳು ಕೋಟೆಯನ್ನು ಪ್ರವೇಶಿಸದಂತೆ ಮುಂಜಾಗ್ರತೆ ವಹಿಸುವ ವಿನ್ಯಾಸವಿದ್ದು ಈ ಕಂದಕದಲ್ಲಿ ಅಪಾಯಕಾರಿ ಮೊಸಳೆಗಳನ್ನು ಬಿಡಲಾಗುತಿತ್ತು ಎಂದು ಹೇಳಲಾಗುತ್ತಿದೆ.
ಕೋಟೆಯ ಮೇಲೆ ವೃತ್ತಾಕಾರದ ಮತ್ತು ಇಳಿಜಾರಾದ ಬುರಜುಗಳಿವೆ. ಕೋಟೆಯ ಒಳಗೆ ಸಾಕಷ್ಟು ಸಂರಚನೆಗಳಿದ್ದು ದರ್ಬಾರ್ ಹಾಲ್, ಅಡುಗೆ ಕೋಣೆ, ಬಾವಿಗಳು ಮುಂತಾದ ರಚನೆಗಳ ಜೊತೆಗೆ ಒಳ ಸುರಂಗದಂತಹ ಭಾಗಗಳು ಕೂಡ ಗೋಚರಿಸುತ್ತವೆ. ತುಳುವ ಅಥವಾ ಸಾಲುವ ರಾಣಿ ಎಂದು ಕರೆಯಲಾಗುವ ಚೆನ್ನಬೈರಾದೇವಿ ಈ ಕೋಟೆಯನ್ನು ಬಳಸಿಕೊಂಡು ಕರಿಮೆಣಸು ಮುಂತಾದ ವನಸ್ಪತಿಗಳನ್ನು ವಿದೇಶಗಳಿಗೆ ಮಾರಾಟ ಮಾಡುವ ಹಿನ್ನೆಲೆಯಲ್ಲಿ ಸಂಗ್ರಹಿಸುವ ತಾಣವನ್ನಾಗಿ ಮಾಡಿಕೊಂಡಿದ್ದಳೆಂದು ಗೊತ್ತಾಗುತ್ತದೆ. ಇದೇ ಕಾರಣದಿಂದ ಆಕೆಯನ್ನು ಅಂದರೆ ಗೇರು ಸೊಪ್ಪೆಯ ಕೆಳದಿ ಚೆನ್ನಮ್ಮನನ್ನು ಕರಿಮೆಣಸಿನ ರಾಣಿ ಎಂದು ಕರೆಯಲಾಗುತ್ತಿತ್ತು. ಸ್ಥಳೀಯರು ಆಡು ಭಾಷೆಯಲ್ಲಿ ಈ ಕೋಟೆಯನ್ನು “ಸರ್ಪ ಮಲ್ಲಿಕನ ಕೋಟೆ” ಎಂದು ಕರೆಯುತ್ತಾರಂತೆ!.