ಗುಂಡ್ಲುಪೇಟೆ: ಕ್ರಿಯಾ ಯೋಜನೆ ರೂಪಿಸಿ ಯಾವುದೇ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸದೆ ನಕಲಿ ಬಿಲ್‍ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್ ಕುಮಾರ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ.
ಬಂಡೀಪುರ ಅಭಯಾರಣ್ಯದಲ್ಲಿ ಬಿಟಿಸಿಎಫ್ ನಿಧಿಯಲ್ಲಿ 14 ಕೋಟಿ ಹಣವನ್ನು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸದೆ ನಕಲಿ ಬಿಲ್‍ಗಳನ್ನು ಸೃಷ್ಟಿಸಿ ಹಣ ದುರುಪಯೋಗವಾದ ಕುರಿತು ಈ ಹಿಂದಿನ ಸರ್ಕಾರದಲ್ಲಿಯೂ ತನಿಖೆಗೆ ಆದೇಶಿಸಿದ್ದರೂ ಕೂಡ ಯಾವುದೇ ಕ್ರಮವಾಗಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡಿ ಲೋಕಾಯುಕ್ತ ತನಿಖೆಗೆ ಆದೇಶಿಸುವಂತೆ ಸ್ಥಳೀಯ ಶಾಸಕ ಎಚ್.ಎಂ.ಗಣೇಶಪ್ರಸಾದ್ ಕೋರಿಕೆ ಮೇರೆಗೆ ನಿಯಮಾನುಸಾರ ಜರೂರು ಕಾನೂನು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್ ಕುಮಾರ್ ಕೋಟ್ಯಾಂತರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇವರನ್ನು ವರ್ಗಾವಣೆ ಅಥವಾ ಅಮಾನತು ಪಡಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಈ ಹಿಂದೆ ರೈತ ಸಂಘಟನೆ ಮುಖಂಡರು ಬಂಡೀಪುರ ಅರಣ್ಯಾಧಿಕಾರಿಗಳ ಕಚೇರಿ ಹಾಗು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.