ಮನೆ ಕಾನೂನು ಸಾರ್ವಜನಿಕ ಹಣ ದುರುಪಯೋಗ: ಕೆಎಸ್’ಪಿಸಿಬಿ ಅಧ್ಯಕ್ಷ ಡಾ.ಶಾಂತ್‌ ಎ.ತಿಮ್ಮಯ್ಯ ವಜಾ

ಸಾರ್ವಜನಿಕ ಹಣ ದುರುಪಯೋಗ: ಕೆಎಸ್’ಪಿಸಿಬಿ ಅಧ್ಯಕ್ಷ ಡಾ.ಶಾಂತ್‌ ಎ.ತಿಮ್ಮಯ್ಯ ವಜಾ

0

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಿ ಸಾರ್ವಜನಿಕ ಹಣದ ದುರುಪಯೋಗ ಮತ್ತು ಗಂಭೀರ ಸ್ವರೂಪದ ದುರ್ನಡತೆಯ ಕಾರಣ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಶಾಂತ್‌ ಎ.ತಿಮ್ಮಯ್ಯ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Join Our Whatsapp Group

ಇದರಿಂದ ತೆರವಾದ ಸ್ಥಾನಕ್ಕೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ.ರವಿ ಅವರನ್ನು ಪ್ರಭಾರದಲ್ಲಿರಿಸಿ ನಾಮ ನಿರ್ದೇಶನ ಮಾಡಲಾಗಿದೆ.

ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಮಂಜೂರಾತಿಯಲ್ಲಿ ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಕಡೆಗಣಿಸಿ ಖಾಸಗಿ ಜಾಹೀರಾತು ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿ  ಶಾಂತ್‌ ತಿಮ್ಮಯ್ಯ ಸಾರ್ವಜನಿಕ ಹಣದ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ತನಿಖೆಗೆ ಆದೇಶಿಸಲಾಗಿತ್ತು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಮಹದೇವ ಅವರು ತನಿಖೆ ನಡೆಸಿ ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮಂಡಳಿ ಸದಸ್ಯ ಸ್ಥಾನದಿಂದಲೂ ಶಾಂತ್‌ ತಿಮ್ಮಯ್ಯ ಅವರನ್ನು ಅನರ್ಹಗೊಳಿಸಲಾಗಿದೆ.

19.92 ಕೋಟಿ ಜಾಹೀರಾತು ನೀಡಿಕೆಗೆ ಜಾಹೀರಾತು ಸಂಸ್ಥೆಗಳ ಆಯ್ಕೆಯಲ್ಲಿ ಅಧಿಕಾರ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆ ಆಗಿದೆ. ಹಣದ ದುರುಪಯೋಗವೂ ಆಗಿದೆ. ಸರ್ಕಾರದ ವ್ಯಾಪ್ತಿಯ ಎಲ್ಲಾ ನಿಗಮ ಮತ್ತು ಮಂಡಳಿಗಳ ಎಲ್ಲಾ ಜಾಹೀರಾತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕವೇ ಬಿಡುಗಡೆ ಮಾಡುವುದು ಕಡ್ಡಾಯವಾಗಿದ್ದರೂ, ಖಾಸಗಿಯವರಿಗೆ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.

ಅಲ್ಲದೇ, ಬಿಬಿಎಂಪಿಯಿಂದ ಅನುಮತಿ ಪಡೆಯದೇ ಜಾಹೀರಾತು ಪ್ರದರ್ಶಿಸಿರುವುದರಿಂದ ಬಿಬಿಎಂಪಿಗೆ ಜಾಹೀರಾತು ಶುಲ್ಕದಲ್ಲಿ ಗಣನೀಯ ನಷ್ಟವಾಗಿದೆ. ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರಾರು ಒಪ್ಪಂದವನ್ನು ಮಾಡಿಕೊಳ್ಳದ ಕಾರಣ ಜಿಎಸ್‌ಟಿ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಜಮೆಯಾಗಬೇಕಿದ್ದ ₹57.46 ಲಕ್ಷ ವರಮಾನ ಕೈತಪ್ಪಿದೆ ಎಂದು ವರದಿ ವಿವರಿಸಿದೆ.

ಮಂಡಳಿಯ ಮಾಹಿತಿ ತಂತ್ರಜ್ಞಾನ (ಐ.ಟಿ) ವಿಭಾಗದ ವ್ಯವಸ್ಥಾಪಕ ಸೂರಿ ಪಾಯಲ್ ಅವರಿಗೆ ಹೆಚ್ಚುವರಿಯಾಗಿ ಸದಸ್ಯ ಕಾರ್ಯದರ್ಶಿ ಹುದ್ದೆಯ ಪ್ರಭಾರವನ್ನೂ ನೀಡಲಾಗಿತ್ತು. ಆ ಬಳಿಕ ಪ್ರಭಾರವನ್ನು ಹಿಂಪಡೆಯುವ ಮೂಲಕ ಶಾಂತ್‌ ತಿಮ್ಮಯ್ಯ ತಮ್ಮ ಅಧಿಕಾರ ಮೀರಿ ನಡೆದುಕೊಂಡಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.