ಯಾದಗಿರಿ: ವಿದ್ಯಾರ್ಥಿನಿಯರ ಜತೆ ಅನುಚಿತ ವರ್ತನೆ ಹಿನ್ನೆಲೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಶಾಲೆಯ ಹೆಡ್ ಮಾಸ್ಟರ್ ಹನುಮೇಗೌಡ ಅವರನ್ನ ಅಮಾನತು ಮಾಡಿ ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ಹನುಮೇಗೌಡ ಹತ್ತನೇ ತರಗತಿ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಶಿಕ್ಷಕನ ಅನುಚಿತ ವರ್ತನೆಗೆ ಬೇಸತ್ತು ವಿದ್ಯಾರ್ಥಿನಿಯರು ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಪೋಷಕರು, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.
ನಂತರ ಪೋಷಕರ ದೂರಿನನ್ವಯ ಅಧಿಕಾರಿಗಳು, ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದುಕೊಂಡಿದ್ದರು. ಇದೀಗ ಮಕ್ಕಳು ಹಾಗೂ ಪೋಷಕರ ಹೇಳಿಕೆಯ ಆಧಾರದ ಮೇಲೆ ಹನುಮೇಗೌಡನನ್ನು ಅಮಾನತು ಮಾಡಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಗರೀಮಾ ಪನ್ವಾರ್ ಆದೇಶಿಸಿದ್ದಾರೆ.