ರಾಜಸ್ಥಾನ: ರೈಲು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ರೈಲು ಹಳಿ ತಪ್ಪಿಸುವ ಯತ್ನ ಕಾನ್ಪುರದಲ್ಲಿ ನಡೆದಿರುವ ಬೆನ್ನಲೇ ಇದೀಗ ರಾಜಸ್ಥಾನದ ಅಜ್ಮೀರ್‌ನಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಅಪರಿಚಿತ ದುಷ್ಕರ್ಮಿಗಳು ರಾಜಸ್ಥಾನದ ಅಜ್ಮೀರ್‌ನಲ್ಲಿ ರೈಲು ಹಳಿ ಮೇಲೆ 70 ಕೆಜಿ ತೂಕದ ಎರಡು ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟು ಗೂಡ್ಸ್ ರೈಲನ್ನು ಹಳಿತಪ್ಪಿಸಲು ಯತ್ನಿಸಿದ್ದಾರೆ.
ಆದರೆ ರೈಲು ಸಿಮೆಂಟ್ ಬ್ಲಾಕ್‌ಗಳಿಗೆ ಡಿಕ್ಕಿ ಹೊಡೆದಿದ್ದರೂ ಯಾವುದೇ ಅವಘಡ ಸಂಭವಿಸಿಲ್ಲ. ಭಾನುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆ ಕುರಿತು ರೈಲ್ವೆ ನೌಕರರು ಪೊಲೀಸರಿಗೆ ದೂರು ನೀಡಿದ್ದಾರೆ.
ಹಳಿ ಮೇಲೆ ಸಿಮೆಂಟ್ ಬ್ಲಾಕ್ ಹಾಕಿರುವ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಎರಡು ಸಿಮೆಂಟ್ ಬ್ಲಾಕ್ ಗಳು ಪತ್ತೆಯಾಗಿದ್ದು ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸಿಮೆಂಟ್ ಬ್ಲಾಕ್ ಪುಡಿಯಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವು ಪ್ರದೇಶಗಳಲ್ಲಿ ರೈಲು ಹಳಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಇತ್ತು ಹಳಿ ತಪ್ಪಿಸುವ ಯತ್ನ ನಡೆದಿತ್ತು. ಈ ವೇಳೆ ಪ್ಯಾಸೆಂಜರ್ ರೈಲು ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಹಾನಿಯಾಗದ ಕಾರಣ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಯಾಗ್‌ರಾಜ್‌ನಿಂದ ಹರಿಯಾಣದ ಭಿವಾನಿಗೆ ತೆರಳುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ಕಾನ್ಪುರದ ಶಿವರಾಜ್‌ಪುರ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಲೊಕೊಮೊಟಿವ್ ಪೈಲಟ್ ಟ್ರ್ಯಾಕ್‌ಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ಗಮನಿಸಿ ತಕ್ಷಣ ಬ್ರೇಕ್ ಹಾಕಿದರು. ಆದರೆ ರೈಲು ನಿಲ್ಲುವ ಮುನ್ನವೇ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯ ನಂತರ ಕಾನ್ಪುರ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್ ಬಾಟಲಿ, ಸ್ಫೋಟಕಗಳು ಮತ್ತು ಬೆಂಕಿಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿ ಪೂಲೇರಾ – ಅಹ್ಮದಾಬಾದ್ ಮಾರ್ಗದ ರೈಲು ಹಳಿ ಮೇಲೆ ದುಷ್ಕರ್ಮಿಗಳು ಸುಮಾರು 70 ಕೆ.ಜಿ ತೂಕದ ಸಿಮೆಂಟ್ ಬ್ಲಾಕ್ ಇಟ್ಟಿದ್ದಾರೆ. ಇದರಿಂದ ರೈಲು ಸಿಮೆಂಟ್ ಬ್ಲಾಕ್‌ಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಘಟನೆಯಲ್ಲಿ ರೈಲಿನ ಇಂಜಿನ್‌ನ ಒಂದು ಭಾಗಕ್ಕೆ ಹಾನಿಯಾಗಿದೆ. ಘಟನೆಯ ಬಗ್ಗೆ ಲೊಕೊ ಪೈಲಟ್ ಆರ್‌ಪಿಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಸ್ಥಳದಲ್ಲಿ ಮುರಿದ ಸಿಮೆಂಟ್ ಬ್ಲಾಕ್ ಭಾಗಗಳು ಪತ್ತೆಯಾಗಿವೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.