ಕಾಠ್ಮಂಡು: ಇಂದು ಬೆಳಗ್ಗೆ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿದ್ದ ಪ್ರಯಾಣಿಕ ಹೆಲಿಕಾಪ್ಟರ್ ಪತನವಾಗಿದೆ ಎಂದು ತಿಳಿದುಬಂದಿದೆ.
ನೇಪಾಳದ ಮೌಂಟ್ ಎವರೆಸ್ಟ್ ಬಳಿಯ ಲಾಮ್ಜುರಾದಲ್ಲಿ ಮಂಗಳವಾರ ಐವರು ಮೆಕ್ಸಿಕನ್ ಪ್ರಜೆಗಲು ಸೇರಿದಂತೆ ಆರು ಜನರನ್ನು ಹೊತ್ತ ಹೆಲಿಕಾಪ್ಟರ್ ಪತನಗೊಂಡಿದೆ.
ಮೌಂಟ್ ಎವರೆಸ್ಟ್ ಮತ್ತು ಇತರ ಎತ್ತರದ ಪರ್ವತ ಶಿಖರಗಳ ನೆಲೆಯಾದ ಸೊಲುಖುಂಬು ಜಿಲ್ಲೆಯ ಸುರ್ಕೆಯಿಂದ ಬರುತ್ತಿದ್ದ ಹೆಲಿಕಾಪ್ಟರ್ ಹಾರಾಟ ಆರಂಭಿಸಿದ 15 ನಿಮಿಷಗಳ ನಂತರ ಸಂಪರ್ಕ ಕಳೆದುಕೊಂಡಿತು. ರಕ್ಷಣಾ ಪಡೆಗಳು ಐದು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ ಮತ್ತು ಆರನೆಯ ದೇಹವನ್ನು ಹುಡುಕುತ್ತಿದ್ದಾರೆ ಎಂದು ಕಾಠ್ಮಂಡು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.
ಖಾಸಗಿ ವಾಣಿಜ್ಯ ಹೆಲಿಕಾಪ್ಟರ್, ವಿದೇಶಿ ಪ್ರವಾಸಿಗರನ್ನು ಮೌಂಟ್ ಎವರೆಸ್ಟ್ ಗೆ ಪ್ರವಾಸಕ್ಕೆ ಕರೆದೊಯ್ದಿತ್ತು. ಕಾಠ್ಮಂಡುವಿಗೆ ಹಿಂತಿರುಗುತ್ತಿದ್ದಾಗ ಬೆಳಿಗ್ಗೆ 10:15 ಕ್ಕೆ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿದೆ.
9N-AMV ಕಾಲ್ ಸೈನ್ ನ ಮನಂಗ್ ಏರ್ ಹೆಲಿಕಾಪ್ಟರನ್ನು ಕ್ಯಾಪ್ಟನ್ ಚೆಟ್ ಗುರುಂಗ್ ಅವರು ಚಲಾಯಿಸುತ್ತಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಭಾಕಂಜೆ ಗ್ರಾಮದ ಲಾಮಜೂರದ ಚಿಹಾಂದಂಡ ಎಂಬಲ್ಲಿ ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ.
ನೇಪಾಳವು ಮಾರಣಾಂತಿಕ ವಾಯು ಅಪಘಾತಗಳ ಇತಿಹಾಸವನ್ನು ಹೊಂದಿದೆ, ಅಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ದೂರದ ಬೆಟ್ಟಗಳು ಮತ್ತು ಪರ್ವತಗಳಲ್ಲಿ ಮೋಡಗಳಿಂದ ಆವೃತವಾದ ಮತ್ತು ರಸ್ತೆಗಳಿಂದ ದೂರವಿರುವ ಸಣ್ಣ ವಿಮಾನ ನಿಲ್ದಾಣಗಳಿಗೆ ಹಾರುತ್ತವೆ.