ಮನೆ ರಾಜ್ಯ ಕೇಂದ್ರ ಸರ್ಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ: ಡಾ.ಜಿ.ಪರಮೇಶ್ವರ್

ಕೇಂದ್ರ ಸರ್ಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ: ಡಾ.ಜಿ.ಪರಮೇಶ್ವರ್

0

ಮೈಸೂರು(Mysuru): ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಡಾ.ಜಿ.ಪರಮೇಶ್ವರ್‌ ವಾಗ್ದಾಳಿ ನಡೆಸಿದರು.

ಗಾಂಧೀಚೌಕದಲ್ಲಿ ಶುಕ್ರವಾರ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ರಾಮನವಮಿಯ ಮಜ್ಜಿಗೆಗೂ ಜಿಎಸ್‌ಟಿ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಬಡವರನ್ನು ಸುಲಿಗೆ ಮಾಡುತ್ತಿದೆ. 2014ರಿಂದಲೂ ಜನರಲ್ಲಿ ಕನಸುಗಳನ್ನು ಬಿತ್ತುವುದಷ್ಟೇ ನರೇಂದ್ರ ಮೋದಿ ಸಾಧನೆಯಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿಲ್ಲ. ಜನರು ನೀಡಿದ ಬಹುಮತವನ್ನು ದುರುಪಯೋಗ ಪಡಿಸಿಕೊಂಡು ಅಂಬಾನಿ, ಅದಾನಿ ಪರ ಕೆಲಸ ಮಾಡುತ್ತಿದ್ದಾರೆ. ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದರು.

ಚುನಾವಣೆಗಳನ್ನು ಗೆಲ್ಲುವ, ಸರ್ಕಾರಗಳನ್ನು ಬೀಳಿಸುವ, ಪ್ರಜಾಪ್ರಭುತ್ವದಲ್ಲಿ ನಡೆಸಿರುವ ರಣತಂತ್ರ ಮೋಸಗಳನ್ನು ಜಗತ್ತು ಗಮನಿಸುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಹಣ ದುರುಪಯೋಗ ಎಲ್ಲಿ ಆಗಿದೆಂಬುದನ್ನು ಜನರಿಗೆ ತೋರಿಸಬೇಕು. ಎಫ್‌ಐಆರ್‌ ದಾಖಲಾಗದೇ ತನಿಖೆ ನಡೆಸಲಾಗುತ್ತಿದೆ ಎಂದರು.

ರಾಹುಲ್‌ ಗಾಂಧಿ ಅವರನ್ನು 50 ಗಂಟೆ ವಿಚಾರಣೆ ನಡೆಸಿ ಮಾನಸಿಕ ಹಿಂಸೆ ನೀಡಲಾಗಿದೆ. ಯಾವ ಕಾನೂನಿನಡಿ ವಿಚಾರಣೆ ನಡೆಸುತ್ತೀರಿ ಎಂದು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿ ಅವರ ಆರೋಗ್ಯ ಸರಿಯಿಲ್ಲದಿದ್ದರೂ ವಿಚಾರಣೆಗೆ ಬಂದಿದ್ದಾರೆ. ಕಾಂಗ್ರೆಸ್ಸಿಗರು ಬ್ರಿಟಿಷರ ಗುಂಡೇಟಿಗೆ ಅಂಜಿಲ್ಲ. ಇನ್ನು ನಿಮ್ಮ ದ್ವೇಷ ರಾಜಕಾರಣಕ್ಕೆ ಹೆದರುತ್ತವೇಯೇ  ಎಂದು ಪ್ರಶ್ನಿಸಿದರು.

ವಿಶ್ವಶ್ರೇಷ್ಠ ಭಾರತದ ಸಂವಿಧಾನಕ್ಕೆ ಅಗೌರವವನ್ನು ನೀಡುವುದನ್ನು ನಿಲ್ಲಿಸಬೇಕು. ವಿರೋಧ ಪಕ್ಷಗಳ ಹಕ್ಕುಗಳನ್ನು ನಾಶಮಾಡುವುದನ್ನು ಮುಂದುವರಿಸಿದರೆ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ನಾವೂ ಮುಂದೊಂದು ದಿನ ಅಧಿಕಾರಕ್ಕೆ ಬರುತ್ತೇವೆ ಎಂದು ಎಚ್ಚರಿಸಿದರು.

ಮುಖಂಡರಾದ ಡಾ.ಎಚ್‌.ಸಿ.ಮಹದೇವಪ್ಪ, ಎಂ.ಕೆ.ಸೋಮಶೇಖರ್‌, ಧರ್ಮಸೇನಾ, ಚಂದ್ರಮೌಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಮಾತನಾಡಿದರು.

ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್, ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಹರೀಶ್ ಗೌಡ, ಮೋದಾಮಣಿ, ಕೆ.ಮರೀಗೌಡ, ಶಿವಣ್ಣ, ಚಂದ್ರಮೌಳಿ ಇದ್ದರು.

ವಶಕ್ಕೆ ಪಡೆದ ಪೊಲೀಸರು: ನಜರ್‌ಬಾದ್‌ನ ಆದಾಯ ತೆರಿಗೆ ಇಲಾಖೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಖಂಡರನ್ನು ಪೊಲೀಸರು ದೊಡ್ಡ ಗಡಿಯಾರದ ಬಳಿ ತಡೆದರು. ಅದಕ್ಕೆ ವಿರೋಧ ವ್ಯಕ್ತಪಡಿಸಿ ರಸ್ತೆಯಲ್ಲೇ ಕೂತು ಪ್ರತಿಭಟನೆ ನಡೆಸಿದ ಪರಮೇಶ್ವರ್‌ ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.