ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷರನ್ನಾಗಿ ಸಿದ್ದಲಿಂಗಪ್ಪ ಶೇಖರಪ್ಪ ಮಿತ್ತಲಕೋಡ್ ಅವರನ್ನು ತಕ್ಷಣದಿಂದಲೇ ಅನ್ವಯಿಸುವಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ನಾಮನಿರ್ದೇಶನ ಮಾಡಿದೆ.
ವಿಶಾಲ್ ರಘು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ತಮ್ಮ ಸ್ಥಾನಕ್ಕೆ ಮತ್ತೊಬ್ಬ ಸದಸ್ಯರನ್ನು ನೇಮಿಸುವಂತೆ ಕೋರಿದ್ದರು. ಅಲ್ಲದೇ, 2023ರ ನವೆಂಬರ್ 5ಕ್ಕೆ ಕೆಎಸ್‌ಬಿಸಿ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ವಕೀಲರ ಕಾಯಿದೆ ಸೆಕ್ಷನ್ 8ರ ಅಡಿ ವಿಸ್ತರಣೆಗೊಂಡಿದ್ದ ಕಾಲಾವಧಿಯೂ 2024ರ ಮೇ 4ರಂದು ಮುಗಿದಿರುವುದರಿಂದ ಹೊಸ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಬಿಸಿಐ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ಪರಿಶೀಲನಾ ಪ್ರಕ್ರಿಯೆ ಮುಗಿಯುವವರೆಗೆ ಚುನಾವಣೆ ನಡೆಸಲು ಮುಂದಾಗದಂತೆ ನಿರ್ದೇಶಿಸಿದ್ದರೂ ಕೆಎಸ್‌ಬಿಸಿಯು 2024ರ ಜೂನ್ 23ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿಗೊಳಿಸಿ ಮೇ 31ರಂದು ನೋಟಿಸ್ ಜಾರಿ ಮಾಡಿತ್ತು. ಇದು ಪರಿಶೀಲನಾ ಪ್ರಕ್ರಿಯೆಗಾಗಿ ಅಧಿಕಾರವಧಿ ವಿಸ್ತರಿಸಿ 2023ರ ಅಕ್ಟೋಬರ್ 17ರಂದು ಬಿಸಿಐ ಮಾಡಿದ್ದ ನಿರ್ಣಯಕ್ಕೆ ವಿರುದ್ಧವಾಗಿದೆ. ಈ ಸೂಚನೆಗಳಿಗೆ ಉದ್ದೇಶಪೂರ್ವಕವಾಗಿ ಅಗೌರವ ತೋರಿರುವುದು ಕಾನೂನು ವೃತ್ತಿಯ ನಿಯಂತ್ರಣ ಚೌಕಟ್ಟಿನ ಅನುಪಾಲನೆಗೆ ವಿರುದ್ಧ ಎಂದು 2024ರ ಜೂನ್ 11ರಂದು ಕೆಎಸ್‌ಬಿಸಿ ಚುನಾವಣೆಗೆ ನಿರ್ಬಂಧ ವಿಧಿಸಿ ಬಿಸಿಐ ಆದೇಶಿಸಿತ್ತು.














