ಮನೆ ರಾಜ್ಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಕೆ ಮಾಡಲು: ಶಾಸಕ ಜಿ.ಟಿ.ದೇವೇಗೌಡ ಮನವಿ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಕೆ ಮಾಡಲು: ಶಾಸಕ ಜಿ.ಟಿ.ದೇವೇಗೌಡ ಮನವಿ

0

ಬೆಂಗಳೂರು : ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಂದ ಬರುವ ಸಿಎಸ್‌ಆರ್ ಫಂಡ್ ಅನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿ, ಸರ್ಕಾರಿ ಶಾಲೆಗಳಿಗೆ ಬಳಸಲು ಅವಕಾಶ ನೀಡಿದರೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಶಾಸಕ ಜಿ.ಟಿ. ದೇವೇಗೌಡರು ಸರ್ಕಾರಕ್ಕೆ ಮನವಿ ಮಾಡಿದರು.

ಶುಕ್ರವಾರ ಬಜೆಟ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರಕ್ಕೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದ ಜಿ.ಟಿ. ದೇವೇಗೌಡ ಅವರು ನನ್ನ ಮತಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ, ಹೂಟಗಳ್ಳಿ, ಬೆಳವಾಡಿ, ಕಡಕೋಳ ಸೇರಿದಂತೆ ಒಟ್ಟು ೧೨೯೯ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು ಕೈಗಾರಿಕೆಗಳಿಂದ ಬರುವ ಸಿಎಸ್‌ಆರ್ ಫಂಡ್ ಅಂಗನವಾಡಿ ನಿರ್ಮಾಣಕ್ಕೆ, ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ, ಪೀಠೋಪಕರಣ ಖರೀದಿಗೆ ಬಳಕೆ ಮಾಡಿದರೆ ಒಂದೊಂದು ಶಾಲೆಯನ್ನು ತೆಗೆದುಕೊಂಡು ಒದಗಿಸಿದರೆ, ಈ ದಿನ ಪೂರ್ಣಗೊಳ್ಳುತ್ತಿತ್ತು. ಆದ್ದರಿಂದ ಸಿಎಸ್‌ಆರ್ ಫಂಡ್ ಅನ್ನು ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಮಾತ್ರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಹಿಂದೆ ಸರ್ಕಾರದಿಂದಲೇ ಕಡಿಮೆ ದರಕ್ಕೆ ಜಮೀನು, ನೀರು, ವಿದ್ಯುಚ್ಛಕ್ತಿ ಎಲ್ಲವನ್ನೂ ಕೊಡುತ್ತಿದ್ದರೂ ಸಹ, ಭೂಮಿ ಕಳೆದುಕೊಂಡ ಕುಟುಂಬದವರಿಗೆ ನೌಕರಿ ನೀಡುತ್ತಿಲ್ಲ, ಆ ಭಾಗದ ರೈತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲಿಕ್ಕೆ ಸಿ.ಎಸ್.ಆರ್. ನಿಧಿಯನ್ನು ಬಳಸಬೇಕು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಇದ್ದು, ಸಿ.ಎಸ್.ಆರ್ ಫಂಡ್‌ನ್ನು ಪರಿಶೀಲನೆ ಮಾಡುತ್ತಾರೆ. ಸ್ಥಳೀಯ ಶಾಸಕರನ್ನು ಸದರಿ ಸಮಿತಿಗೆ ಸದಸ್ಯರನ್ನಾಗಿ ಮಾಡಿದರೆ ಆಗ ಸಮಿತಿಗೆ ಸಿ.ಎಸ್.ಆರ್ ಫಂಡ್ ಯಾವ ರೀತಿ ಬಳಕೆಯಾಗುತ್ತಿದೆ, ಜಮೀನು ಕಳಕೊಂಡವರಿಗೆ ನೌಕರಿ ಇಲ್ಲ ಎಂಬುದರ ಬಗ್ಗೆ ಗಮನಕ್ಕೆ ತರಬಹುದು. ಅಲ್ಲದೆ, ಸಿ.ಎಸ್.ಆರ್. ಫಂಡ್‌ನ್ನು ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೆ ಮಾತ್ರ ಉಪಯೋಗಿಸಬೇಕೆಂದು ಈ ದಿನ ತೀರ್ಮಾನ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿದರು.

ಸರ್ಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರು ಉತ್ತರ ನೀಡುವಾಗ ನೀವು ನೀಡಿರುವ ಸಲಹೆಗಳು ಅರ್ಥ ಪೂರ್ಣವಾಗಿದ್ದು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.