ಮನೆ ರಾಜ್ಯ ಬೆಂಗಳೂರು ಮಾದರಿಯಲ್ಲಿ ಮೈಸೂರು ನಗರಕ್ಕೆ ನಾಲ್ಕು  ತಹಶೀಲ್ದಾರ್ ಹುದ್ದೆ ಸೃಷ್ಠಿಸಲು ಕಂದಾಯ ಸಚಿವರಲ್ಲಿ ಶಾಸಕ ಜಿ.ಟಿ.ದೇವೇಗೌಡ...

ಬೆಂಗಳೂರು ಮಾದರಿಯಲ್ಲಿ ಮೈಸೂರು ನಗರಕ್ಕೆ ನಾಲ್ಕು  ತಹಶೀಲ್ದಾರ್ ಹುದ್ದೆ ಸೃಷ್ಠಿಸಲು ಕಂದಾಯ ಸಚಿವರಲ್ಲಿ ಶಾಸಕ ಜಿ.ಟಿ.ದೇವೇಗೌಡ ಮನವಿ

0

ಮೈಸೂರು ನಗರ ವ್ಯಾಪ್ತಿಯಲ್ಲಿ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೆಲವೊಂದು ಪ್ರದೇಶಗಳಿದ್ದು, ಬೆಂಗಳೂರಿನ ರೀತಿಯಲ್ಲಿ  ಮೈಸೂರು ನಗರಕ್ಕೆ ನೂತನವಾಗಿ ನಾಲ್ಕು ತಹಶೀಲ್ದಾರ್ ಹುದ್ದೆಯನ್ನು ಸೃಷ್ಠಿಸುವಂತೆ ಕಂದಾಯ ಸಚಿವರಲ್ಲಿ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

ಅವರು ಇಂದು ಮೈಸೂರಿನ ಜಲದರ್ಶಿನಿಯಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡರನ್ನು ಬೇಟಿ ನೀಡಿ, ಮೈಸೂರು ತಾಲ್ಲೂಕು ತಹಶೀಲ್ದಾರ್‌ ರವರಿಗೆ ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಜೊತೆಗೆ ವರುಣಾ ವಿಧಾನಸಭಾ ಕ್ಷೇತ್ರದ ವರುಣಾ ಹೋಬಳಿಯು ವ್ಯಾಪ್ತಿಗೆ ಬರಲಿದ್ದು, ಕಾರ್ಯಭಾರ ಹೆಚ್ಚಿಗೆ ಇರುವುದರಿಂದ ತಹಶೀಲ್ದಾರ್‌ ಗೆ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ತಹಶೀಲ್ದಾರ್‌ಗೆ ಮೈಸೂರು ನಗರದ ಜಮೀನುಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಪ್ರಕರಣಗಳಿದ್ದು, ವಾರಕ್ಕೆ ಮೂರು ದಿನ ಹೈಕೋರ್ಟ್ ಗೆ ತಹಶಿಲ್ದಾರ್ ಹೋಗುತ್ತಾರೆ, ಇದರಿಂದ ತಾಲ್ಲೂಕಿನ ರೈತರಿಗೆ ಕೆಲಸ ಕಾರ್ಯಗಳು ಆಗದೆ ಬಹಳ ತೊಂದರೆಯಾಗುತ್ತಿದೆ, ಆದ್ದರಿಂದ ಮೈಸೂರು ನಗರದ ನಾಲ್ಕು ಭಾಗಗಳಿಗೆ ಒಂದರಂತೆ ಹೊಸ ತಹಶೀಲ್ದಾರ್ ಹುದ್ದೆಯನ್ನು ಸೃಷ್ಠಿಸುವಂತೆ ಕೋರಿದರು.

 ನಂತರ ಕಂದಾಯ ಸಚಿವರಲ್ಲಿ ಮೈಸೂರು ತಾಲ್ಲೂಕಿನಲ್ಲಿ ರೈತರು ನೂರಾರು ವರ್ಷಗಳಿಂದ ಜಮೀನುಗಳನ್ನು ಉಳುಮೆ ಮಾಡುತ್ತಾ ಬಂದಿದ್ದು, ನಗರ ಪ್ರದೇಶದಿಂದ ೧೦ ಕಿ.ಮೀ. ಒಳಗೆ ಇರುವ ಜಮೀನುಗಳಿಗೆ ಸಾಗುವಳಿ ನೀಡುತ್ತಿಲ್ಲ, ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದ್ದು, ಈ ರೈತರ ಅನುಕೂಲಕ್ಕಾಗಿ ರೈತರು ಉಳುಮೆ ಮಾಡುತ್ತಿರುವ ಜಮೀನಿ ಪೈಕಿ ಅರ್ಧ ಸರ್ಕಾರ ವಹಿಸಿಕೊಂಡು ಬಾಕಿ ಜಮೀನನ್ನು ರೈತರಿಗೆ ಉಳುವೆ ಮಾಡುವ ಸಲುವಾಗಿ ಸಕ್ರಮ ಮಾಡಿಕೊಡುವಂತೆ ಕೋರಿದರು.

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ಚಿಕ್ಕನಹಳ್ಳಿ, ಹಾರೋಹಳ್ಳಿ, ಗುಮ್ಮಚನಹಳ್ಳಿ, ಎಸ್.ಕಲ್ಲಹಳ್ಳಿ, ಅರಸನಕೆರೆ, ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ, ಮಾವಿನಹಳ್ಳಿ, ಮದ್ದೂರು, ಮದ್ದೂರುಹುಂಡಿ ಗ್ರಾಮಗಳಲ್ಲಿ ರೈತರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದು, ಅರಣ್ಯ ಇಲಾಖೆಯವರ ಎನ್.ಓ.ಸಿ. ನೀಡದೆ, ಈ ರೈತರಿಗೆ ಸಾಗುವಳಿ ನೀಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಕಂದಾಯ ಇಲಾಖೆ, ಭೂ ಮಾಪನ ಇಲಾಖೆ ಮತ್ತು ಅರಣ್ಯ ಇಲಾಖೆಯವರ ತಂಡವನ್ನು ರಚಿಸಿ, ಜಂಟಿ ಸರ್ವೆ ಮಾಡಿಸಿ, ರೈತರಿಗೆ ಎನ್.ಓ.ಸಿ. ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು.

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಗಳಲ್ಲಿ ಲಭ್ಯ ಇರುವ ಸರ್ಕಾರಿ ಜಮೀನುಗಳನ್ನು ಸ್ಮಶಾನಕ್ಕೆ ಕಾಯ್ದಿರಿಸುವಂತೆ ಹಾಗೂ ಗ್ರಾಮಗಳಲ್ಲಿ ಲಭ್ಯ ಇರುವ ಸರ್ಕಾರಿ ಜಮೀನುಗಳನ್ನು ಆ ಗ್ರಾಮಗಳ ಆಶ್ರಯ ಬಡಾವಣೆಗಳನ್ನು ನಿರ್ಮಾಣ ಮಾಡಲು ಕಾಯ್ದಿರಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಮೈಸೂರು ನಗರ ಪ್ರದೇಶದಲ್ಲಿರುವ ಕೆರೆಗಳನ್ನು ಹಾಗೂ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿ, ಬಡಾವಣೆಗಳನ್ನು ನಿರ್ಮಾಣ ಮಾಡಿರುತ್ತಾರೆ, ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಟಾಸ್ಕ್ ಪೋರ್ಸ್ ರಚಿಸಿ, ಕೂಡಲೇ ಕೆರೆಗಳು ಮತ್ತು ರಾಜ ಕಾಲುವೆಗಳನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ

ಈ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕಟಾರಿಯ, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್‌ರವರು, ಮೈಸೂರು ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ, ಮಂಡ್ಯ ಜಿಲ್ಲಾಧಿಕಾರಿಗಳಾದ ಕುಮಾರ್‌ರವರ ಹಾಜರಿದ್ದರು.