ಬೆಂಗಳೂರು(Bengaluru): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್ ಅವರು, ಈ ಭೇಟಿಯಲ್ಲಿ ಯಾವುದೇ ಕುತೂಹಲವಿಲ್ಲ. ಬೆಂಗಳೂರು ಬಂದಾಗ ಸಹಜವಾಗಿ ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಹಾಗೂ ಸಮಾಜದ ಮುಖಂಡರಾಗಿದ್ದಾರೆ. ಅವರ ಅರ್ಶಿವಾದ ಪಡೆಯುವ ನಿಟ್ಟಿನಲ್ಲಿ ಭೇಟಿಯಾಗಿದ್ದೇನೆ. ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಸಮುದಾಯದ ಅಥವಾ ರಾಜಕೀಯದ ಬಗ್ಗೆ ಚರ್ಚೆನಾ ಎಂಬ ಪ್ರಶ್ನೆಗೆ, ಎರಡೂ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ಸಮುದಾಯದ ಮುಖಂಡರು ಅವರಿಗೆ ಗೌರವ ಕೊಟ್ಟುಕೊಂಡು ಬಂದಿದ್ದೇನೆ ಎಂದು ಹೇಳಿದರು.
ಸಮುದಾಯದಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ, ತಾಂತ್ರಿಕ ಕಾರಣದಿಂದ ಮೀಸಲಾತಿ ವಿಳಂಬವಾಗ್ತಿದೆ. ಈ ಅವಧಿಯಲ್ಲಿ ಮೀಸಲಾತಿ ಸಿಗುವ ಭರವಸೆ ಇದೆ.ಸಿಎಂ ಬೊಮ್ಮಾಯಿ ಸಹ ಬರವಸೆ ನೀಡಿದ್ದಾರೆ. ಬೇರೆ ಸಮುದಾಯಕ್ಕೆ ಮೀಸಲಾತಿ ತೊಂದರೆ ಆಗದಂತೆ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದರು.
ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಡಿಕೆ ಶಿವಕುಮಾರೋತ್ಸವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮೋತ್ಸವ ಆಚರಿಸಬೇಕೆಂದು ಬರೆದ ಪತ್ರದ ಬಗ್ಗೆ ನಮ್ಗೆ ಮಾಹಿತಿ ಇಲ್ಲ. ಸಿದ್ದರಾಮೋತ್ಸವ ಸಮಿತಿಯಲ್ಲಿ ನಾನು ಇದ್ದೇನೆ. ಸಮಿತಿಯ ಪೂರ್ವಭಾವಿ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ. ಸಿದ್ದರಾಮಯ್ಯನವರು 75 ವರ್ಷ ರಾಜಕೀಯ ಜೀವನದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಿದ್ದರಾಮೋತ್ಸವವನ್ನು ನಾವೆಲ್ರೂ ಸೇರಿ ಮಾಡ್ತಿದೀವಿ ಎಂದರು.
75 ವರ್ಷದ ಮನುಷ್ಯ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಅವರು ಹಿರಿಯರು ಅವರೊಬ್ಬರೇ ಕಾರ್ಯಕ್ರಮ ಮಾಡಿ ಅಂತಿಲ್ಲ. ನಾವೆಲ್ಲ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ. ಅವರಿಗೆ ಒಳ್ಳೆಯದು ಆಗಲಿ ಅನ್ನೋದು ನಮ್ಮೆಲ್ಲರ ಆಸೆ ಎಂದು ಹೇಳಿದರು.